ಜಾಗತಿಕ ಮಟ್ಟದಲ್ಲಿ ಸುಸ್ಥಿರ, ಯಶಸ್ವಿ ಹಾಗೂ ಸಮಷ್ಟಿ ಹಿತದ ಆರ್ಥಿಕ ಪ್ರಗತಿ ಸಾಧ್ಯವಾಗಬೇಕಾದರೆ ಮಹಿಳೆಯರ ಪಾತ್ರ ಅತ್ಯಗತ್ಯ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಐದು ದಿನಗಳ ಕಾಲ ಭಾರತದ ಭೇಟಿಗಾಗಿ ಶುಕ್ರವಾರ ರಾತ್ರಿ ಮುಂಬೈ ಆಗಮಿಸಿದ್ದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕ್ಲಿಂಟನ್ ಅವರು ಶನಿವಾರ ಗುಜರಾತ್ ಮೂಲದ ಸರ್ಕಾರೇತರ ಸಂಸ್ಥೆ ಸೇವಾದ ವ್ಯಾಪಾರ ಮಳಿಗೆಗೆ ಭೇಟಿ ನೀಡಿ, ಸಂಸ್ಥೆಯ ಒಂದು ಸಾವಿರ ಪಾಲುದಾರರೊಂದಿಗೆ ಸ್ಕೈಪ್ ಮೂಲಕ ನಡೆದ ಸಂವಾದದಲ್ಲಿ, ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಸ್ಥಿರತೆಯಲ್ಲಿ ಮಹಿಳೆಯರ ಪಾತ್ರ ಬಹಳ ಮಹತ್ವದ್ದು, ಅವರನ್ನು ಕೈಬಿಟ್ಟರೆ ಅಭಿವೃದ್ಧಿ ಅಸಾಧ್ಯ ಎಂದು ನುಡಿದರು.
ಈಗಿನ ಜಾಗತಿಕ ಆರ್ಥಿಕ ಕುಸಿತವು ಮಹಿಳೆಯರ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರಿದೆ. ಸುಸ್ಥಿರ ಹಾಗೂ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯುತ್ತಿರುವ ಸ್ವಉದ್ಯೋಗಿ ಮಹಿಳಾ ಸಂಘದ ಕಾರ್ಯವೈಖರಿ ಇಂತಹ ಸಂದರ್ಭದಲ್ಲಿ ಎಲ್ಲರಿಗೂ ಮಾದರಿಯಾಗಬೇಕು ಎಂದರು. |