ಏರ್ ಇಂಡಿಯಾವು ಪೂರೈಸುವಂತೆ ಕೇಳಿಕೊಂಡಿದ್ದ ವಿಮಾನಗಳನ್ನು ರದ್ದು ಅಥವಾ ಮುಂದೂಡುವ ಕ್ರಮಕ್ಕೆ ಬಂದಿಲ್ಲ ಎಂದು ಅಮೆರಿಕಾದ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ಸ್ಪಷ್ಟಪಡಿಸಿದೆ.
ಆದರೆ ಜೆಟ್ ಏರ್‌ವೇಸ್ ಪೂರೈಸುವಂತೆ ಕೇಳಿಕೊಂಡಿದ್ದ ಏಳು ಜೆಟ್‌ಗಳ ವಿತರಣೆಯನ್ನು ಮುಂದಕ್ಕೆ ಹಾಕಿದೆ ಎಂದು ಬೋಯಿಂಗ್ ತಿಳಿಸಿದೆ.
"ಯಾವುದೇ ವಿಮಾನಗಳ ರದ್ದು ಅಥವಾ ಮುಂದೂಡಿಕೆ ಬಗ್ಗೆ ಏರ್ ಇಂಡಿಯಾದ ಜತೆ ಯಾವುದೇ ಮಾತುಕತೆ ನಡೆಯುತ್ತಿಲ್ಲ. ಆ ಸಂಸ್ಥೆಯೀಗ ಸಂಕಷ್ಟದ ಸ್ಥಿತಿಯಲ್ಲಿದೆ. ಆದರೆ ಇದುವರೆಗೂ ಏರ್ ಇಂಡಿಯಾ ಜತೆ ಪೂರೈಕೆ ಮುಂದೂಡಲ್ಪಡುವ ಮಾತುಕತೆ ನಡೆದಿಲ್ಲ" ಎಂದು ಬೋಯಿಂಗ್ ಸಂಸ್ಥೆಯ ಭಾರತದ ಅಧ್ಯಕ್ಷ ದಿನೇಶ್ ಕೇಸ್ಕರ್ ಪತ್ರಕರ್ತರಿಗೆ ವಿವರಿಸಿದ್ದಾರೆ.
ಜೆಟ್ ಏರ್‌ವೇಸ್ ಖಾಸಗಿ ವಿಮಾನಯಾನ ಸಂಸ್ಥೆಯು ಎರಡು ಬೋಯಿಂಗ್ -777 ಮತ್ತು ಐದು ಬೋಯಿಂಗ್ 737 ವಿಮಾನಗಳನ್ನು ಎರಡರಿಂದ ಮೂರು ವರ್ಷಗಳ ನಂತರ ಪೂರೈಸುವಂತೆ ಕೇಳಿಕೊಂಡಿದೆ ಎಂದೂ ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬೋಯಿಂಗ್ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಒಂಬತ್ತು ವಿಮಾನಗಳನ್ನು ಪೂರೈಸಲಿದೆ. ಅವುಗಳಲ್ಲಿ ಏರ್ ಇಂಡಿಯಾಕ್ಕೆ ಐದು ಬೋಯಿಂಗ್ -777, ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಮೂರು ಬೋಯಿಂಗ್ -737 ಹಾಗೂ ಜೆಟ್ ಏರ್‌ವೇಸ್‌ಗೆ ಒಂದು ಬೋಯಿಂಗ್ -737 ವಿಮಾನಗಳನ್ನು ಒದಗಿಸುವ ಒಪ್ಪಂದ ಮಾಡಿಕೊಂಡಿದೆ.
|