ನಾಗರಿಕನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಗುರುತಿನ ಚೀಟಿಯನ್ನು ವಿತರಿಸುವ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ರಾಷ್ಟ್ರೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಮುಖ್ಯಸ್ಥರಾಗಿ ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ವಿತ್ತ ಸಚಿವ ಪ್ರಣಬ್ ಮುಖರ್ಜಿ ತನ್ನ ಬಜೆಟ್ ಭಾಷಣದಲ್ಲಿ ಹೇಳಿರುವಂತೆ ಮುಂದಿನ 12ರಿಂದ 18 ತಿಂಗಳುಗಳ ಅವಧಿಯಲ್ಲಿ ಮೊದಲ ಹಂತದ ಗುರುತಿನ ಚೀಟಿ ಸಿದ್ಧವಾಗಲಿದೆ ಎಂದು ನಿಲೇಕಣಿ ತಿಳಿಸಿದ್ದಾರೆ.
"ಮುಂದಿನ 12ರಿಂದ 18 ತಿಂಗಳುಗಳಲ್ಲಿ ನಾವು ಮೊದಲ ಹಂತದ ಗುರುತಿನ ಚೀಟಿ ವಿತರಿಸಲಿದ್ದೇವೆ" ಎಂದು ಪತ್ರಕರ್ತರಿಗೆ ವಿವರಿಸಿದ್ದಾರೆ.
1978ರ ಬ್ಯಾಚ್‌ನ ಜಾರ್ಖಂಡ್ ಕೇಡರ್‌ನ ಐಎಎಸ್ ಅಧಿಕಾರಿ ರಾಮ್ ಸೇವಕ್ ಶರ್ಮಾ ಸಂಸ್ಥೆಯ ಕಾರ್ಯದರ್ಶಿ ಮತ್ತು ಕಾರ್ಯನಿರ್ವಾಹಕಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ನಿಲೇಕಣಿ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಸಂಪೂರ್ಣ ತಂಡವನ್ನು ಹೊಂದಲು ಇನ್ನೂ ಕೆಲವು ವಾರಗಳು ಬೇಕಾಗಬಹುದು ಎಂದು ಜುಲೈ 13ರಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್‌ರಿಂದ ರಾಷ್ಟ್ರೀಯ ವಿಶಿಷ್ಟ ಗುರುತಿನ ಚೀಟಿ ಯೋಜನೆ ಅಧ್ಯಕ್ಷರಾಗಿ ನೇಮಕಗೊಂಡಿದ್ದ ನಿಲೇಕಣಿ ತಿಳಿಸಿದ್ದಾರೆ.
|