ಮೈಕ್ರೋಸಾಫ್ಟ್ ತನ್ನ ಹೊಸ ಆಪರೇಟಿಂಗ್ ಸಿಸ್ಟಮ್ 'ವಿಂಡೋಸ್ 7'ನ್ನು ಅಕ್ಟೋಬರ್ ತಿಂಗಳೊಳಗೆ ಮಾರುಕಟ್ಟೆಗೆ ಬಿಡಲು ಯೋಚಿಸುತ್ತಿದ್ದು, ಪೂರಕ ಹಾರ್ಡ್‌ವೇರ್ ರಚನೆಗಾಗಿ ಕಂಪ್ಯೂಟರ್ ತಯಾರಿಕಾ ಕಂಪನಿಗಳಿಗೆ ತಂತ್ರಾಂಶ ಸಂಕೇತಗಳನ್ನು ಬಿಡುಗಡೆ ಮಾಡಿದೆ.ಹೆವ್ಲೆಟ್-ಪ್ಯಾಕಾರ್ಡ್ ಕೋ, ಡೆಲ್ ಐಎನ್‌ಸಿ, ಏಸರ್ ಐಎನ್‌ಸಿ ಮತ್ತು ಇತರ ಕಂಪ್ಯೂಟರ್ ತಯಾರಿಕಾ ಕಂಪನಿಗಳು ಹೊಸ ಪಿಸಿ, ಲ್ಯಾಪ್‌ಟಾಪ್ ಮತ್ತು ನೋಟ್‌ಬುಕ್‌ಗಳಿಗೆ ನೂತನ ಅಪರೇಟಿಂಗ್ ಸಿಸ್ಟಂ ಬಳಸಲಿವೆ. ಮೈಕ್ರೋಸಾಫ್ಟ್ ಮತ್ತು ಕಂಪ್ಯೂಟರ್ ತಯಾರಿಕಾ ಕಂಪನಿಗಳು ವಿಂಡೋಸ್ 7ನ್ನು ಅಕ್ಟೋಬರ್ 22ರಂದು ಸಂಪೂರ್ಣವಾಗಿ ಹೊರಜಗತ್ತಿಗೆ ಪರಿಚಯಿಸುವ ಭರವಸೆಯಿಂದಿವೆ. ಜಾಗತಿಕ ಆರ್ಥಿಕ ಸಂಕಷ್ಟಕ್ಕೆ ಆ ಮೂಲಕ ಚೇತರಿಕೆ ನೀಡುವ ವಿಶ್ವಾಸ ಅವುಗಳದ್ದು.ಕಂಪ್ಯೂಟರ್ ತಯಾರಕರು ವಿಂಡೋಸ್ 7ನ ಆರಂಭಿಕ ಆವೃತ್ತಿಗಳನ್ನು ಕಳೆದ ಹಲವಾರು ತಿಂಗಳುಗಳಿಂದ ತಮ್ಮ ಹಾರ್ಡ್‌ವೇರ್‌ಗಳಲ್ಲಿ ಪರೀಕ್ಷೆ ನಡೆಸುತ್ತಿದ್ದರು. ಇದೀಗ ಅಂತಿಮ ತಂತ್ರಾಂಶ ಲಭ್ಯವಾಗಿರುವ ಕಾರಣ ಕೆಲವೇ ವಾರಗಳಲ್ಲಿ ಉದ್ದೇಶಿತ ಕಾರ್ಯಗಳು ಪೂರ್ಣಗೊಳ್ಳಲಿವೆ ಎಂಬ ವಿಶ್ವಾಸವನ್ನು ಕಂಪನಿಗಳು ವ್ಯಕ್ತಪಡಿಸಿವೆ.ಅಕ್ಟೋಬರ್ 22ರಿಂದ ವಿಂಡೋಸ್ 7ನ ಇಂಗ್ಲೀಷ್, ಸ್ಪಾನಿಷ್, ಜಪಾನೀಸ್, ಜರ್ಮನ್, ಫ್ರೆಂಚ್, ಇಟಾಲಿಯನ್, ಡಚ್, ರಷ್ಯನ್, ಪೋಲಿಶ್, ಬ್ರೆಜಿಲಿಯನ್ ಪೋರ್ಚುಗೀಸ್, ಕೊರಿಯನ್ ಮತ್ತು ಚೈನೀಸ್ ಆವೃತ್ತಿಗಳು ಲಭ್ಯವಾಗಲಿವೆ.ಅಕ್ಟೋಬರ್ 31ರಿಂದ 21 ಭಾಷೆಗಳಲ್ಲಿ ಇದು ಗ್ರಾಹಕರ ಕೈ ಸೇರಲಿದೆ. ತುರ್ಕಿಶ್, ಝೆಕ್, ಪೋರ್ಚುಗೀಸ್, ಹಂಗೇರಿಯನ್, ಸ್ವೀಡಿಶ್, ಡ್ಯಾನಿಷ್, ನಾರ್ವೇಯನ್, ಫಿನ್ನಿಶ್, ಗ್ರೀಕ್, ಉಕ್ರೇನಿಯನ್, ರೊಮೇನಿಯನ್, ಅರೇಬಿಕ್, ಲಿಥೂಯಾನಿಯನ್, ಬಲ್ಗೇರಿಯನ್, ಈಸ್ಟೋನಿಯನ್, ಸ್ಲೋವೆನಿಯನ್, ಹಿಬ್ರೂ, ಥಾಯ್, ಕ್ರೊವೇಷಿಯನ್, ಸೆರ್ಬಿಯನ್ ಲ್ಯಾಟಿನ್ ಮತ್ತು ಲ್ಯಾಟ್ವಿಯನ್ ಆವೃತ್ತಿಗಳು ಈ ಹಂತದಲ್ಲಿ ಲಭ್ಯ.ಯಶಸ್ವೀ ವಿಂಡೋಸ್ 95 ಮತ್ತು 98 ನಂತರ ವಿಂಡೋಸ್ ಎಕ್ಸ್‌ಪಿ ಹೊರತುಪಡಿಸಿದರೆ ಉಳಿದೆಲ್ಲಾ ಅಪರೇಟಿಂಗ್ ಸಿಸ್ಟಂಗಳು ವಿಫಲವಾಗಿರುವುದಕ್ಕೆ ಮೈಕ್ರೋಸಾಫ್ಟ್ ತಲೆ ಕೆಡಿಸಿಕೊಂಡಿದೆ. ವಿಂಡೋಸ್ ಮಿಲೇನಿಯಂ, 2000 ಮತ್ತು ವಿಸ್ತಾಗಳ ವೈಫಲ್ಯಗಳನ್ನು ಮೆಟ್ಟಿ ನಿಲ್ಲುವ ಭರವಸೆ 'ವಿಂಡೋಸ್ 7'ನಲ್ಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. |