ಅಂಬಾನಿಗಳು, ರೆಡ್ಡಿಗಳು, ಮಲ್ಯ ಮುಂತಾದವರು ಸ್ವಂತ ಹೆಲಿಕಾಫ್ಟರ್‌ನಲ್ಲಿ ಸುತ್ತಾಡುವುದನ್ನು ಕಂಡು ಕರುಬಿದವರಿಗೊಂದು ಸ್ವೀಟ್ ಸುದ್ದಿಯಿದು. ವಿದ್ಯುತ್ ಚಾಲಿತ ಸ್ಕೂಟರ್‌ಗಳಂತೆ ಕಡಿಮೆ ಖರ್ಚಿನಲ್ಲಿ ಓಡಾಡಬಹುದಾದ ಹೆಲಿಕಾಫ್ಟರ್ ಕೂಡ ಬಂದಿದೆ..!ಸಿನೋ-ಬ್ರಿಟೀಷ್ ವಿಮಾನ ತಯಾರಿಕಾ ಕಂಪನಿ 'ಯೂನಿಕ್' ಜಗತ್ತಿನ ಮೊತ್ತ ಮೊದಲ ವಿದ್ಯುತ್ ಚಾಲಿತ ವಾಣಿಜ್ಯ ಲಘು ವಿಮಾನವನ್ನು ಪರಿಚಯಿಸಿದೆ. ಎರಡು ಸೀಟುಗಳನ್ನು ಹೊಂದಿರುವ 'ಇ430' ಎಂಬ ಈ ಲಘು ವಿಮಾನ ಇತ್ತೀಚೆಗಷ್ಟೇ ಲಾಸ್ ಎಂಜಲೀಸ್‌ನಲ್ಲಿ ಪರೀಕ್ಷಾ ಹಾರಾಟ ನಡೆಸಿದೆ.ಪರೀಕ್ಷಾ ಹಾರಾಟದಲ್ಲಿ ಎರಡು ಗಂಟೆಗಳ ಕಾಲ ಎರಡು ವಿಮಾನಗಳ 3,000 ಅಡಿ ಎತ್ತರದಲ್ಲಿ ಯಶಸ್ವೀ ಹಾರಾಟ ನಡೆಸಿವೆ. ಹಾಗಾಗಿ ವೈಮಾನಿಕ ಕ್ಷೇತ್ರದಲ್ಲಿ ಇದು ಮತ್ತೊಂದು ಮೈಲುಗಲ್ಲು ಎಂದೇ ಪರಿಗಣಿಸಲಾಗುತ್ತಿದೆ.ಈ ಲಘು ವಿಮಾನವು 40 ಕಿಲೋ ವ್ಯಾಟ್ ಶಕ್ತಿಯ ಪವರ್ ಡ್ರೈವ್ 400 ಇಂಜಿನ್ ಹೊಂದಿದೆ. ನಾಲ್ಕು ಅಥವಾ ಆರು ಲೀಥಿಯಮ್ ಪೋಲಿಮರ್ 30ಎಎಚ್ ಬ್ಯಾಟರಿಗಳನ್ನು ಇದು ಬಳಸಿಕೊಳ್ಳುತ್ತದೆ.ಸಕಲೇಂದ್ರಿಯಗಳನ್ನು ಮುಚ್ಚುವಂತೆ ಮಾಡುವ ಈಗಿನ ವಿಮಾನ ಅಥವಾ ಹೆಲಿಕಾಫ್ಟರುಗಳಿಂದ ನೀವು ನೊಂದಿದ್ದೀರಾದರೆ ಈ ಲಘು ವಿಮಾನ ಖುಷಿ ಕೊಡಬಹುದು. ಯಾಕೆಂದರೆ ಇದರಲ್ಲಿ ಶಬ್ದವೇ ಬರುವುದಿಲ್ಲ. ಹಾಗಾಗಿ ಪರಿಸರ ಸ್ನೇಹಿಯೆಂಬ ಮೆಚ್ಚುಗೆ ಪಡೆದುಕೊಂಡಿದೆ.ನಾಲ್ಕು ಬ್ಯಾಟರಿಗಳನ್ನು ಜೋಡಿಸಿಕೊಂಡರೆ ಒಂದೂವರೆ ಗಂಟೆಯಿಂದ ಎರಡು ಗಂಟೆಗಳ ಕಾಲ ಹಾರಾಟ ನಡೆಸಬಹುದು. ಆರು ಬ್ಯಾಟರಿಗಳಿದ್ದರೆ ಎರಡೂವರೆ ಗಂಟೆಗಳವರೆಗೆ ಬಾನಂಗಲದಲ್ಲಿ ಮೆರೆಯಬಹುದು. ಮಾಮೂಲಿ 240 ವೋಲ್ಟ್‌ನ ಸಾಕೆಟ್‌ಗಳಿಂದ ರೀಚಾರ್ಜ್ ಮಾಡಿಕೊಳ್ಳಬಹುದು. ರೀಚಾರ್ಜ್ ಅವಧಿ ಕೂಡ ತೀರಾ ಕಡಿಮೆ - ಕೇವಲ ಮೂರೇ ಗಂಟೆಗಳಲ್ಲಿ ಬ್ಯಾಟರಿ ಫುಲ್ ಆಗುತ್ತದೆ.ಇತರ ವಿಮಾನಗಳಿಗೆ ಹೋಲಿಸಿದರೆ ಇದನ್ನು ಬಿಡೋದು ತುಂಬಾ ಸುಲಭ. ಆದರೆ ಖರೀದಿಸೋದು ಮಾತ್ರ ಕಷ್ಟ. ಯಾಕೆಂದರೆ ಇದರ ಬೆಲೆ ಸುಮಾರು 40 ಲಕ್ಷ ರೂಪಾಯಿಗಳು.ಇನ್ನಷ್ಟೇ ಮಾರಾಟ ಹಾಗೂ ಹಾರಾಟದ ಅನುಮತಿಯನ್ನು ಗಿಟ್ಟಿಸಿಕೊಳ್ಳಬೇಕಿರುವ ಈ ಲಘು ವಿಮಾನ 2010ರ ವೇಳೆಗೆ ಖರೀದಿಗೆ ಸಿದ್ಧವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. |