ನ್ಯೂಯಾರ್ಕ್ ಮಾರುಕಟ್ಟೆಯ ಅಹೋರಾತ್ರಿ ಬೆಳವಣಿಗೆಗಳ ಕಾರಣದಿಂದ ದಾಸ್ತಾನುದಾರರಿಂದ ಬೇಡಿಕೆ ಪಡೆದ ಚಿನಿವಾರ ಪೇಟೆ ಮೂರೂವರೆ ತಿಂಗಳ ನಂತರ ಮತ್ತೊಮ್ಮೆ 15 ಸಾವಿರ ರೂಪಾಯಿಗಳ ಗಡಿಯನ್ನು ದಾಟಿದೆ.
ಕೈಗಾರಿಕಾ ವಲಯದಿಂದ ಬೇಡಿಕೆ ಬಂದ ಕಾರಣ ಬೆಳ್ಳಿ ದರದಲ್ಲೂ ಏರಿಕೆಯಾಗಿದೆ. ಉತ್ಕೃಷ್ಟ ಚಿನ್ನ (99.5 ಶುದ್ಧ) ದರದಲ್ಲಿ ಪ್ರತೀ 10 ಗ್ರಾಂಗಳಿಗೆ 80 ರೂಪಾಯಿಗಳಂತೆ ಹೆಚ್ಚಳವಾಗಿದ್ದು, ಕಳೆದ ಮೂರೂವರೆ ತಿಂಗಳ ನಂತರ ಮತ್ತೆ 15,015 ರೂಪಾಯಿಗಳನ್ನು ತಲುಪಿದೆ.
ನಿನ್ನೆ ಚಿನ್ನವು 14,935 ರೂಪಾಯಿಗಳಿಗೆ ವ್ಯವಹಾರ ಅಂತ್ಯಗೊಳಿಸಿತ್ತು. 2009ರ ಏಪ್ರಿಲ್ 2ರಂದು ಪ್ರತೀ 10 ಗ್ರಾಂ ಚಿನ್ನದ ಬೆಲೆಯು 15,080 ರೂಪಾಯಿಗಳೆಂದು ದಾಖಲಾಗಿತ್ತು. ಮತ್ತೆ ಅದೇ ಹಂತದ ಸನಿಹ ತಲುಪಿರುವುದು ಇದೇ ಮೊದಲು.
ಶುದ್ಧ ಚಿನ್ನ (99.9) ಕೂಡ ಆರಂಭಿಕ ವ್ಯವಹಾರದಲ್ಲಿ 85 ರೂಪಾಯಿಗಳ ಏರಿಕೆ ಕಂಡು 15,090 ರೂಪಾಯಿಗಳನ್ನು ತಲುಪಿದೆ. ಕಳೆದ ರಾತ್ರಿಯ ವ್ಯವಹಾರ 15,005ಕ್ಕೆ ಅಂತ್ಯಗೊಂಡಿತ್ತು.
ಸಿದ್ಧ ಬೆಳ್ಳಿ (.999) ದರದಲ್ಲಿ ಪ್ರತೀ ಕಿಲೋವೊಂದರಲ್ಲಿ 245 ರೂಪಾಯಿಗಳ ಭಾರೀ ಏರಿಕೆ ಕಂಡಿದ್ದು, 22,505 ರೂಪಾಯಿಗಳಿದ್ದ ದರವು 22,750 ರೂಪಾಯಿಗಳನ್ನು ಮುಟ್ಟಿದೆ.
ವಾಲ್‌ಸ್ಟ್ರೀಟ್‌ನಲ್ಲಿನ ಬದಲಾವಣೆಗಳಿಗೆ ಹೊಂದಿಕೊಂಡ ನ್ಯೂಯಾರ್ಕ್ ಚಿನಿವಾರ ಪೇಟೆಯಲ್ಲಿ ಆರು ವಾರಗಳ ಗರಿಷ್ಠ ಬೆಲೆ ದಾಖಲಾಗಿತ್ತು. ನ್ಯೂಯಾರ್ಕ್ ಮರ್ಕೆಂಟೈಲ್ ಎಕ್ಸ್‌ಚೇಂಜ್‌ನ ಕಾಮೆಕ್ಸ್ ವಿಭಾಗದಲ್ಲಿ ಪ್ರತೀ ಔನ್ಸ್ ಚಿನ್ನಕ್ಕೆ 6.40 ಡಾಲರುಗಳಂತೆ ಹೆಚ್ಚಳವಾಗಿದ್ದು, ಆಗಸ್ಟ್ ವಿತರಣೆಯು 953.30 ಡಾಲರುಗಳನ್ನು ದಾಖಲಿಸಿದೆ.
ಸೆಪ್ಟೆಂಬರ್ ವಿತರಣೆಯ ಬೆಳ್ಳಿ ದರ ಕೂಡ 23 ಸೆಂಟ್ಸ್‌ಗಳ ಏರಿಕೆಯಾಗಿದ್ದು, ದಿನ ವ್ಯವಹಾರ ಮುಕ್ತಾಯಗೊಳಿಸಿದಾಗ ಪ್ರತೀ ಔನ್ಸ್ ಬೆಳ್ಳಿ ದರ 13.70 ಡಾಲರುಗಳು.
|