ಸೇವಾದಾರರನ್ನು ಬದಲಾಯಿಸಿದರೂ ಮೊಬೈಲ್ ನಂಬರ್ ಉಳಿದುಕೊಳ್ಳುವ ಹೊಸ ವ್ಯವಸ್ಥೆ (ಮೊಬೈಲ್ ನಂಬರ್ ಪೋರ್ಟಬಿಲಿಟಿ) ದೇಶದಲ್ಲಿ ಜಾರಿಗೆ ಬರಲು ಇನ್ನೂ ಮೂರು ತಿಂಗಳು ಬೇಕಾಗಬಹುದು ದೂರವಾಣಿ ಇಲಾಖೆ ತಿಳಿಸಿದೆ.
ಈ ಹಿಂದೆ ತಿಳಿಸಿದಂತೆ ನಿಗದಿತ ಸಮಯಕ್ಕೆ ಮೊಬೈಲ್ ಪೋರ್ಟಬಿಲಿಟಿ ವ್ಯವಸ್ಥೆಯನ್ನು ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ ಹೊಸ ವ್ಯವಸ್ಥೆಯ ತಯಾರಿಯಲ್ಲಿ ಟೆಲಿಕಾಂ ವ್ಯಸ್ತವಾಗಿದೆ ಎಂದು ಇಲಾಖೆ ವಿವರಣೆ ನೀಡಿದೆ.
ಗ್ರಾಹಕರು ಪ್ರಸಕ್ತ ಹೊಂದಿರುವ ಮೊಬೈಲ್ ಸೇವಾದಾರರಿಂದ ಮತ್ತೊಂದು ಸೇವಾದಾರರ ಪರಿಧಿಗೆ ಅಥವಾ ಒಂದು ತಂತ್ರಜ್ಞಾನದಿಂದ ಮತ್ತೊಂದು ಸೇವಾ ತಂತ್ರಜ್ಞಾನಕ್ಕೆ ವರ್ಗಾವಣೆಗೊಂಡಾಗಲೂ ಮೊಬೈಲ್ ನಂಬರ್ ಬದಲಾವಣೆಯಾಗದ ವ್ಯವಸ್ಥೆಯೇ ಮೊಬೈಲ್ ನಂಬರ್ ಪೋರ್ಟಬಿಲಿಟಿ.
"ಈ ವರ್ಷಾಂತ್ಯದೊಳಗೆ ಮೊಬೈಲ್ ನಂಬರ್ ಪೋರ್ಟಬಿಲಿಟಿ ವ್ಯವಸ್ಥೆ ಜಾರಿಗೆ ಬರಲಿದೆ" ಎಂದು ದೂರವಾಣಿ ಸಂಪರ್ಕ ಇಲಾಖೆ ಕಾರ್ಯದರ್ಶಿ ಸಿದ್ಧಾರ್ಥ ಬೆಹೂರಾ ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಮೊಬೈಲ್ ನಂಬರ್ ಪೋರ್ಟಬಿಲಿಟಿ ಕಾರ್ಯಗತಗೊಳ್ಳಲು ತಡವಾಗುತ್ತಿರುವುದೇಕೆ ಎಂಬ ಪ್ರಶ್ನೆಗೆ ಅವರು, "ಇದು ಹೊಸ ತಂತ್ರಜ್ಞಾನ.. ಹಾಗಾಗಿ ಕೆಲವೊಂದು ನಿಯಮಾವಳಿಗಳನ್ನು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಆ ಸಿದ್ಧತೆ ನಡೆಯುತ್ತಿದೆ" ಎಂದರು.
ಸೆಪ್ಟೆಂಬರ್ ಮಾಸಾಂತ್ಯದೊಳಗೆ ದೇಶದ ಪ್ರಮುಖ ನಗರಗಳಲ್ಲಿ ಮೊಬೈಲ್ ಪೋರ್ಟಬಿಲಿಟಿ ವ್ಯವಸ್ಥೆಯು ಜಾರಿಗೆ ಬರಲಿದೆ. ನಿಧಾನವಾಗಿ ದೇಶದಾದ್ಯಂತ ಇದು ಕಾರ್ಯನಿರ್ವಹಿಸಲಿದೆ ಎಂದು ಈ ಹಿಂದೆ ಸರಕಾರವು ತಿಳಿಸಿತ್ತು.
|