ಅಮೆರಿಕಾ ಆರ್ಥಿಕತೆಯಲ್ಲಿ ಸುಧಾರಣೆಯ ಚಿಹ್ನೆಗಳು ಗೋಚರಿಸುತ್ತಿದ್ದಂತೆ ಚೇತರಿಕೆ ಕಂಡಿದ್ದ ಕಚ್ಚಾ ತೈಲ ಮಾರುಕಟ್ಟೆ ಅಲ್ಪ ಕುಸಿತಕ್ಕೊಳಗಾಗಿದ್ದು, ಪ್ರತೀ ಬ್ಯಾರೆಲ್‌ಗೆ 67 ಡಾಲರುಗಳನ್ನು ದಾಖಲಿಸಿದೆ.
ಸಿಂಗಾಪುರದಲ್ಲಿನ ನ್ಯೂಯಾರ್ಕ್ ಮರ್ಕಂಟೈಲ್ ಎಕ್ಸ್‌ಚೇಂಜ್‌ನ ಎಲೆಕ್ಟ್ರಾನಿಕ್ ವ್ಯವಹಾರದಲ್ಲಿ ಸೆಪ್ಟೆಂಬರ್ ವಿತರಣೆಯ ಬೆಂಚ್‌ಮಾರ್ಕ್ ಕಚ್ಚಾ ತೈಲ ಬೆಲೆಯಲ್ಲಿ 31 ಸೆಂಟ್ಸ್‌ಗಳ ಕುಸಿತ ಕಂಡಿದ್ದು, ಪ್ರತೀ ಬ್ಯಾರೆಲ್ ತೈಲ ಬೆಲೆಯೀಗ 66.85 ಡಾಲರ್.
ಗುರುವಾರ 1.76 ಡಾಲರುಗಳ ಏರಿಕೆ ಕಂಡಿದ್ದ ತೈಲ ಬೆಲೆ 67.16 ಡಾಲರುಗಳಲ್ಲಿ ಸ್ಥಿರವಾಗಿತ್ತು. ಇದು ಕಳೆದ ಮೂರು ವಾರಗಳಿಂದ ದಾಖಲಿಸಿದ ಗರಿಷ್ಠ ದರವಾಗಿದ್ದರೂ ಮತ್ತೆ ಹಿನ್ನಡೆ ಕಾಣುತ್ತಿರುವುದರಿಂದ ಮಾರುಕಟ್ಟೆ ಕಳವಳ ವ್ಯಕ್ತಪಡಿಸಿದೆ.
ಆದರೂ ಇನ್ನು ಕೆಲವೇ ವಾರಗಳಲ್ಲಿ ತೈಲ ಬೆಲೆ ಏರಿಕೆಯಾಗುವ ಭರವಸೆ ಅವರದ್ದು. ಜೂನ್ 30ರಂದು 73.23 ಡಾಲರ್‌ಗಳಂತೆ ಪ್ರತೀ ಬ್ಯಾರೆಲ್ ತೈಲಕ್ಕೆ ದಾಖಲಾದ ಎಂಟು ತಿಂಗಳ ಗರಿಷ್ಠ ದರವನ್ನು ಶೀಘ್ರದಲ್ಲೇ ಮಾರುಕಟ್ಟೆ ದಾಖಲಿಸಲಿದೆ ಎಂದು ತಜ್ಞರು ಕೂಡ ಅಭಿಪ್ರಾಯಪ್ಟಿದ್ದಾರೆ.
ನೈಮ್ಸಾಕ್ಸ್‌ನ ಮತ್ತೊಂದು ವ್ಯವಹಾರದಲ್ಲಿ ಆಗಸ್ಟ್ ತಿಂಗಳ ಗ್ಯಾಸೊಲಿನ್ ವಿತರಣೆಯು ಬದಲಾವಣೆಯಾಗದಲೆ ಗ್ಯಾಲನ್‌ಗೆ 1.91 ಡಾಲರುಗಳನ್ನು ದಾಖಲಿಸಿದೆ. ಆದರೆ ಹೀಟಿಂಗ್ ತೈಲ 0.64 ಸೆಂಟ್‌ಗಳ ಕುಸಿತ ಕಂಡು 1.76 ಡಾಲರುಗಳಿಗೆ ಕುದುರಿತು.
ಆಗಸ್ಟ್ ವಿತರಣೆಯ ನ್ಯಾಚುರಲ್ ಗ್ಯಾಸ್ ಸ್ಥಿರತೆ ದಾಖಲಿಸಿದ್ದು, 1000 ಕ್ಯೂಬಿಕ್ ಅಡಿಗೆ 3.55 ಡಾಲರುಗಳಂತೆ ಮಾರಾಟವಾಗಿದೆ.
ಲಂಡನ್‌ನಲ್ಲಿ ಐಸಿಇ ಫ್ಯೂಚರ್ಸ್ ಎಕ್ಸ್‌ಚೇಂಜ್‌ನ ಫ್ರೆಂಟ್ ದರಗಳು 21 ಸೆಂಟ್ಸ್‌ಗಳ ಕುಸಿತ ಕಂಡಿದ್ದು, ಪ್ರತೀ ಬ್ಯಾರೆಲ್‌ಗೆ 69.04 ಡಾಲರುಗಳನ್ನು ದಾಖಲಿಸಿವೆ.
|