ಇಟಲಿ ಕಾರು ತಯಾರಿಕಾ ಕಂಪನಿ ಫಿಯೆಟ್ ಜತೆ ಕೈ ಸೇರಿಸಲಿರುವ ಟಾಟಾ ಮೋಟಾರ್ಸ್, ಲ್ಯಾಟಿನ್ ಅಮೆರಿಕಾದಲ್ಲಿ ತನ್ನ ಅಗ್ಗದ ನ್ಯಾನೋವನ್ನು ಬಿಡುಗಡೆ ಮಾಡುವ ಯೋಚನೆಯಲ್ಲಿದೆ.
ಲ್ಯಾಟಿನ್ ಅಮೆರಿಕಾಕ್ಕೆ ನ್ಯಾನೋವನ್ನು ತರುವ ಬಗ್ಗೆ ಫಿಯೆಟ್ ಮತ್ತು ಟಾಟಾ ಮೋಟಾರ್ಸ್ ಸಂಸ್ಥೆಗಳು ಸಮಾಲೋಚನೆ ನಡೆಸುತ್ತಿವೆ ಎಂದು ಇಟಾಲಿಯನ್ ಪತ್ರಿಕೆ 'ಲಾ ಸ್ಟಾಂಪಾ'ಗೆ ನೀಡಿರುವ ಸಂದರ್ಶನದಲ್ಲಿ ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ತಿಳಿಸಿದ್ದಾರೆ.
ಇವೆಕೋ, ಫೆರಾರಿ ಮತ್ತು ಮಸೆರಾಟಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಎರಡು ಕಂಪನಿಗಳು ಸತತ ಮಾತುಕತೆಯಲ್ಲಿವೆ ಎಂದು ಫಿಯೆಟ್ ಕಂಪನಿಯ ಸ್ವತಂತ್ರ ನಿರ್ದೇಶಕರೂ ಆಗಿರುವ ರತನ್ ಟಾಟಾ ವಿವರಿಸಿದ್ದಾರೆ.
ಜಗತ್ತಿನ ಅಗ್ಗದ ಕಾರೆಂಬ ಹೆಗ್ಗಳಿಕೆ ಪಡೆದಿದ್ದ ನ್ಯಾನೋ ಕಳೆದ ವಾರವಷ್ಟೇ ಭಾರತದ ರಸ್ತೆಗಳಿಗಿಳಿದಿತ್ತು. ಈ ವರ್ಷದ ಮಾರ್ಚ್ 23ರಂದು ಜಗತ್ತಿಗೆ ನ್ಯಾನೋವನ್ನು ತೋರಿಸಿದ್ದ ಟಾಟಾ 2.06 ಲಕ್ಷ ಮುಂಗಡ ಕಾದಿರಿಸುವ ಬೇಡಿಕೆಯನ್ನು ಪಡೆದುಕೊಂಡಿತ್ತು.
ಟಾಟಾ ಮೋಟಾರ್ಸ್ ಈಗಾಗಲೇ ನ್ಯಾನೋ ವಿತರಿಸಲು ಒಂದು ಲಕ್ಷ ಗ್ರಾಹಕರನ್ನು ಆಯ್ಕೆ ನಡೆಸಿದ್ದು, 2010ರ ಮಾರ್ಚ್ ತಿಂಗಳೊಳಗೆ ಮೊದಲ ಹಂತದ ಕಾರ್ಯ ಮುಗಿಸುವುದಾಗಿ ಹೇಳಿಕೊಂಡಿದೆ.
ಭಾರತದಲ್ಲಿ ಟಾಟಾ ಮೋಟಾರ್ಸ್ ಮತ್ತು ಫಿಯೆಟ್ 50:50ರ ಜಂಟಿ ಪಾಲುದಾರಿಕೆಯನ್ನು ಫಿಯೆಟ್ ಅಟೋಮೊಬೈಲ್ಸ್ ಇಂಡಿಯಾ ಲಿಮಿಟೆಡ್ ಕಂಪನಿಯಲ್ಲಿ ಹೊಂದಿವೆ. ಈ ಕಂಪನಿ ಇಂಜಿನ್‌ಗಳು ಸೇರಿದಂತೆ ಹಲವು ಉತ್ಪಾದನೆಗಳಲ್ಲಿ ನಿರತವಾಗಿದೆ.
|