ಸಾರ್ವಜನಿಕ - ಖಾಸಗಿ ಸಹಭಾಗಿತ್ವದಡಿಯಲ್ಲಿ ಹನ್ನೊಂದು ರಾಜ್ಯಗಳಲ್ಲಿನ 15,560 ಕೋಟಿ ರೂಪಾಯಿ ಮೊತ್ತದ 15 ಹೆದ್ದಾರಿ ಯೋಜನೆಗಳಿಗೆ ಕೇಂದ್ರ ಸರಕಾರವು ಒಪ್ಪಿಗೆ ಸೂಚಿಸಿದೆ.
ವಿತ್ತ ಕಾರ್ಯದರ್ಶಿ ಅಶೋಕ್ ಚಾವ್ಲಾ ಅಧ್ಯಕ್ಷರಾಗಿರುವ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಗುಣಮಟ್ಟ ಅಂದಾಜು ಸಮಿತಿಯು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಯೋಜನೆಗಳಿಗೆ ಅನುಮೋದನೆ ನೀಡಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಈ 15 ಹೆದ್ದಾರಿ ಯೋಜನೆಯಲ್ಲಿ ಕರ್ನಾಟಕದ ಯಾವುದೇ ಪ್ರಸ್ತಾಪ ಕಂಡು ಬಂದಿಲ್ಲ. ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ತಾನ, ಮಧ್ಯಪ್ರದೇಶ, ಹರ್ಯಾಣ, ಉತ್ತರಾಂಚಲ, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶಗಳಿಗಷ್ಟೇ ಹೆದ್ದಾರಿ ಯೋಜನೆ ಮೀಸಲು.
ಗೋವಾದಲ್ಲಿನ ರಾಷ್ಟ್ರೀಯ ಹೆದ್ದಾರಿ 17ರಲ್ಲಿನ ನಾಲ್ಕರಿಂದ ಆರು ಲೇನ್‌ಗಳ ಹೆದ್ದಾರಿ ಯೋಜನೆಗೆ 2,078 ಕೋಟಿ, ರಾಷ್ಟ್ರೀಯ ಹೆದ್ದಾರಿ 4ರ ಮಹಾರಾಷ್ಟ್ರದಲ್ಲಿನ ಪುಣೆಯಿಂದ ಸತಾರವರೆಗಿನ ಯೋಜನೆಗೆ 1,724 ಕೋಟಿ, ಗುಜರಾತ್‌ನ ರಾಷ್ಟ್ರೀಯ ಹೆದ್ದಾರಿ 8ಎ ಸಮಖೈಲಿ - ಗಾಂಧಿಧಾಮ ಹೆದ್ದಾರಿ ಯೋಜನೆಗೆ 805 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ.
"ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಗುಣಮಟ್ಟ ಅಂದಾಜು ಸಮಿತಿಯು ಕಾರ್ಯಾರಂಭ ಮಾಡಿದ 2006ರ ಜನವರಿಯಿಂದ ಇದುವರೆಗೆ 116 ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದ್ದು, ಒಟ್ಟು ಯೋಜನೆಯ ವೆಚ್ಚ 1,15,228.91 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಯೋಜನೆಯಲ್ಲಿ 103 ಹೆದ್ದಾರಿಗಳು, 9 ಬಂದರು ಯೋಜನೆಗಳು, 2 ವಿಮಾನ ನಿಲ್ದಾಣ ಯೋಜನೆಗಳು ಹಾಗೂ ತಲಾ ಒಂದರಂತೆ ಮೂಲಭೂತ ಸೌಕರ್ಯ ಮತ್ತು ರೈಲ್ವೇ ಯೋಜನೆಗಳು ಸೇರಿವೆ.
|