ಮಳೆಯ ಅನಿಶ್ಚಿತತೆ ಮುಂದುವರಿದ ಹಿನ್ನಲೆಯಲ್ಲಿ ಬಾಧಕಗಳ ಬಗ್ಗೆ ಎಚ್ಚೆತ್ತುಕೊಂಡಿರುವ ಕೇಂದ್ರ ಸರಕಾರವು ಬಾಸ್ಮತಿಯೇತರ ಅಕ್ಕಿ ಮತ್ತು ಗೋಧಿ ರಫ್ತಿನ ಮೇಲೆ ನಿಷೇಧ ಹೇರುವ ನಿರ್ಧಾರಕ್ಕೆ ಬಂದಿದ್ದು, ರೈತರಿಗೆ ರಾಜ್ಯ ಸರಕಾರಗಳು ನೀಡುತ್ತಿರುವ ಡೀಸೆಲ್‌ನ ಸಬ್ಸಿಡಿ ದರದಲ್ಲಿ ಅರ್ಧದಷ್ಟನ್ನು ಭರಿಸುವುದಾಗಿಯೂ ಹೇಳಿದೆ.
ಮಾನ್ಸೂನ್ ಪರಿಸ್ಥಿತಿ ಮತ್ತು ಮುಂಗಾರು ಬಿತ್ತನೆ ಕುರಿತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಜತೆ ಚರ್ಚಿಸಿದ ಮರುದಿನ ರಾಜ್ಯ ಸಭೆಯಲ್ಲಿ ಆಹಾರ ಮತ್ತು ಕೃಷಿ ಸಚಿವ ಶರದ್ ಪವಾರ್ ಈ ನಿರ್ಧಾರವನ್ನು ಪ್ರಕಟಿಸಿದರು.
ಇದೇ ವೇಳೆ ಆಹಾರ ವಸ್ತುಗಳ ಕೊರತೆಯ ಬಗೆಗಿನ ಭೀತಿಯನ್ನು ತಳ್ಳಿ ಹಾಕಿದ ಅವರು, "ನಾವೀಗ ಹೊಂದಿರುವ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದ್ದು, ಹಲವು ತಿಂಗಳುಗಳ ಕಾಲ ಯಾವುದೇ ಸಮಸ್ಯೆ ಬಾಧಿಸದು" ಎಂದರು.
ಬೇಳೆಕಾಳುಗಳ ಬೆಲೆ 95ರಿಂದ 100ರಲ್ಲಿದ್ದು, ಏರುವೇಗದಲ್ಲಿ ಸಾಗುತ್ತಿರುವುದರ ಬಗ್ಗೆ ಕೂಡ ಅವರು, ಇದು ತಾತ್ಕಾಲಿಕ ಪರಿಸ್ಥಿತಿಯಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ರಾಜ್ಯಗಳಿಗೆ ಆರ್ಥಿಕ ಸಹಕಾರ ನೀಡುವ ಬಗ್ಗೆ ಯೋಚಿಸಲಾಗುತ್ತಿದೆ. ಈ ಬಗ್ಗೆ ಯಾವುದೇ ವಿಚಾರಗಳನ್ನು ಈಗಲೇ ಬಹಿರಂಗಪಡಿಸಲಾಗದು ಎಂದಿದ್ದಾರೆ.
ಬಿಹಾರ ಸರಕಾರವು ರೈತರಿಗೆ ಸಬ್ಸಿಡಿ ದರದಲ್ಲಿ ನೀಡಿರುವ ಡೀಸೆಲ್‌ನ ಶೇಕಡಾ 50ರಷ್ಟು ಮೊತ್ತವನ್ನು ಸರಕಾರ ಭರಿಸಲಿದೆ. ಇದೇ ಕೊಡುಗೆಯನ್ನು ಇತರ ರಾಜ್ಯಗಳಿಗೂ ವಿಸ್ತರಿಸುವ ಮೂಲಕ ಸಹಾಯ ಹಸ್ತ ಚಾಚಲಾಗುತ್ತದೆ ಎಂದು ಪವಾರ್ ತಿಳಿಸಿದ್ದಾರೆ.
|