ಸರ್ಚ್ ಇಂಜಿಯನ್ ದೈತ್ಯ ಗೂಗಲ್ ಜತೆಗಿನ ಸ್ಪರ್ಧೆ 'ತಮಾಷೆಯಾಗಿದೆ' ಎಂದು ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಲಘು ಧಾಟಿಯಲ್ಲಿ ಹೇಳಿದ್ದಾರೆ.
ಹಲವಾರು ವರ್ಷಗಳಿಂದ ಶೋಧನೆಯಲ್ಲಿ ತನ್ನನ್ನು ಮೀರಿಸುವವರು ಯಾರೂ ಇಲ್ಲವೆಂದೇ ಬೀಗುತ್ತಿದ್ದ ಗೂಗಲ್‌ಗೆ ಪ್ರತಿಯಾಗಿ ಇತ್ತೀಚೆಗಷ್ಟೇ ಮೈಕ್ರೋಸಾಫ್ಟ್ 'ಬಿಂಗ್' ಎನ್ನುವ ಸರ್ಚ್ ಇಂಜಿನ್ ಬಿಡುಗಡೆ ಮಾಡಿತ್ತು.
ಆದರೆ ಅದೇ ಹೊತ್ತಿಗೆ ಗೂಗಲ್‌ನ ಸಾಧನೆ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ ಪ್ರವಾಸದಲ್ಲಿರುವ ಗೇಟ್ಸ್ ಈ ಬಗ್ಗೆ ಮಾತನಾಡುತ್ತಾ, "ಗೂಗಲ್ ಶ್ರೇಷ್ಠ ಕೆಲಸವನ್ನೇ ಮಾಡಿದೆ" ಎಂದರು.
ಶೋಧನಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನೊತ್ತಲು ಮೈಕ್ರೋಸಾಫ್ಟ್ ಯತ್ನಿಸುತ್ತಿದ್ದು, ಅದಕ್ಕಿರುವ ಪ್ರಮುಖ ಎದುರಾಳಿ ಗೂಗಲ್. ವಿಶ್ವದ ಇತರೆಲ್ಲಾ ಸರ್ಚ್ ಇಂಜಿನ್‌ಗಳಲ್ಲಿ ಗೂಗಲ್ ಪ್ರಸಕ್ತ ಅಗ್ರ ಮಟ್ಟವನ್ನು ಕಾಯ್ದುಕೊಂಡಿದೆ.
ಮುಂದಿನ ದಿನಗಳಲ್ಲಿನ ಜನಪ್ರಿಯ ಸರ್ಚ್ ಇಂಜಿನ್ ಯಾವುದಾಗಲಿದೆ ಎಂಬ ಪ್ರಶ್ನೆಯೊಂದಕ್ಕೆ ಗೇಟ್ಸ್ ಮುಗುಳ್ನಗುತ್ತಾ, "ಭವಿಷ್ಯದ ಸರ್ಚ್ ಇಂಜಿನ್ ಬಿಂಗ್..." ಎಂದರು.
ಇತ್ತೀಚಿನ ದಿನಗಳಲ್ಲಿ ಗೂಗಲ್ ಮತ್ತು ಮೈಕ್ರೋಸಾಫ್ಟ್ ನಡುವೆ ಶೀತಲ ಸಮರ ನಡೆಯುತ್ತಿರುವುದರಿಂದ ಗ್ರಾಹಕರಿಗೆ ಅದರ ಲಾಭವಾಗುತ್ತಿದೆ ಎಂದು ವಿಶ್ಲೇಷಕರು ಈಗಾಗಲೇ ಅಭಿಪ್ರಾಯಪಟ್ಟಿದ್ದಾರೆ.
ಗೂಗಲ್‌ನ ಸರ್ಚ್ ಇಂಜಿನ್‌ಗೆ ಪ್ರತಿಯಾಗಿ 'ಬಿಂಗ್', ಆನ್‌ಲೈನ್ ಸ್ಪ್ರೆಡ್‌ಶೀಟ್ 'ಗೂಗಲ್ ಡಾಕ್'ಗೆ ಮೈಕ್ರೋಸಾಫ್ಟ್‌ನ 'ಆಫೀಸ್ ಆನ್‌ಲೈನ್', ಮೈಕ್ರೋಸಾಫ್ಟ್ ಆಪರೇಟಿಂಗ್ ಸಿಸ್ಟಮ್ 'ವಿಂಡೋಸ್'ಗೆ ಪ್ರತಿಯಾಗಿ ಗೂಗಲ್ ಕ್ರೋಮ್ ಆಪರೇಟಿಂಗ್ ಸಿಸ್ಟಂ ಹೀಗೆ ಪ್ರತೀ ವಲಯದಲ್ಲೂ ಈ ಎರಡು ಕಂಪನಿಗಳು ಪರಸ್ಪರ ತೀವ್ರ ಪೈಪೋಟಿ ನೀಡುತ್ತಿವೆ.
|