ಜುಲೈ 27ರಿಂದ ಜಾರಿಗೆ ಬರುವಂತೆ ಭಾರತೀಯ ಸ್ಟೇಟ್ ಬ್ಯಾಂಕ್ ಆರು ತಿಂಗಳಿಗಿಂತ ಹೆಚ್ಚಿನ ಅವಧಿಯ ಠೇವಣಿಯ ಮೇಲಿನ ಬಡ್ಡಿ ದರವನ್ನು ಶೇ.0.25ರಿಂದ ಶೇ.0.50ರವರೆಗೆ ಕಡಿತಗೊಳಿಸಿದ್ದು, ಇತರ ಬ್ಯಾಂಕುಗಳು ಕೂಡ ಇದನ್ನೇ ಅನುಸರಿಸುವ ಸಾಧ್ಯತೆಯಿದೆ.
ಇದರ ಪ್ರಕಾರ ಒಂದು ವರ್ಷದಿಂದ ಎರಡು ವರ್ಷದೊಳಗಿನ ಠೇವಣಿಯ ಮೇಲಿನ ಬಡ್ಡಿ ದರವು ಪ್ರಸಕ್ತ ಇರುವ ಶೇಕಡಾ 7ರಿಂದ ಶೇ.6.5ಕ್ಕೆ ಇಳಿಯಲಿದೆ. ಅದೇ ರೀತಿ 1,000 ದಿನಗಳ ಠೇವಣಿ ಮೇಲಿನ ಬಡ್ಡಿಯು ಶೇ.7.5ರಿಂದ ಶೇ.7.25ಕ್ಕೆ ಕಡಿತಗೊಳ್ಳಲಿದೆ.
ಸರಕಾರಿ ಸ್ವಾಮ್ಯದ ಹಾಗೂ ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐ ಜೂನ್ ತಿಂಗಳಲ್ಲಿ ಠೇವಣಿಗಳ ಬಡ್ಡಿ ದರವನ್ನು ಶೇ.0.25ರಷ್ಟು ಕಡಿತಗೊಳಿಸಿತ್ತು.
ಮಾರುಕಟ್ಟೆ ದರಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಲುವಾಗಿ ನಾವು ಠೇವಣಿ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸುತ್ತಿದ್ದೇವೆ ಎಂದು ಉಪ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಎಸ್.ಎಸ್. ರಂಜನ್ ತಿಳಿಸಿದ್ದಾರೆ.
15ರಿಂದ 45, 46ರಿಂದ 90, 91ರಿಂದ 180 ದಿನಗಳವರೆಗಿನ ಠೇವಣಿಗಳ ಬಡ್ಡಿ ದರದಲ್ಲಿ ಯಾವುದೇ ವ್ಯತ್ಯಾಸಗಳನ್ನು ಮಾಡಲಾಗಿಲ್ಲ. 181 ದಿನಗಳಿಂದ ಒಂದು ವರ್ಷದೊಳಗಿನ ಠೇವಣಿಯ ಮೇಲಿನ ಬಡ್ಡಿ ದರವನ್ನು ಶೇ.6.25ರಿಂದ ಶೇ.6ಕ್ಕೆ, ಒಂದು ವರ್ಷದಿಂದ ಎರಡು ವರ್ಷದೊಳಗಿನ ಅವಧಿಗೆ ಶೇ.7ರಿಂದ ಶೇ.6.50ಕ್ಕೆ, ಎರಡು ವರ್ಷದಿಂದ ಒಂದು ಸಾವಿರ ದಿನಗಳವರೆಗಿನ ಠೇವಣಿ ಮೇಲಿನ ಬಡ್ಡಿ ದರವು ಶೇ.7.25ರಿಂದ ಶೇ.7ಕ್ಕೆ ಇಳಿಕೆ ಮಾಡಲಾಗಿದೆ.
ಒಂದು ಸಾವಿರ ದಿನಗಳ ಠೇವಣಿ ಬಡ್ಡಿ ದರವನ್ನು ಶೇ.7.50ರಿಂದ ಶೇ.7.25ಕ್ಕೆ, 1001ದಿನದಿಂದ ಮೂರು ವರ್ಷದೊಳಗಿನ ಅವಧಿಗೆ ಶೇ.7.25ರಿಂದ ಶೇ.7ಕ್ಕೆ ಕಡಿತಗೊಳಿಸಲಾಗಿದ್ದರೆ, ಮೂರು ವರ್ಷದಿಂದ ಐದು ವರ್ಷದೊಳಗಿನ ಠೇವಣಿಯ ಮೇಲಿನ ಬಡ್ಡಿಯನ್ನು ಬದಲಾವಣೆ (ಶೇ.7.25) ಮಾಡಲಾಗಿಲ್ಲ.
ಐದರಿಂದ ಎಂಟು ವರ್ಷಗಳವರೆಗಿನ ಬಡ್ಡಿ ದರವನ್ನು ಶೇ.7.75ರಿಂದ ಶೇ.7.50ಕ್ಕೆ ಹಾಗೂ ಎಂಟು ವರ್ಷಗಳಿಂದ 10 ವರ್ಷಗಳವರೆಗಿನ ಠೇವಣಿಯ ಮೇಲಿನ ಬಡ್ಡಿ ದರವನ್ನು ಶೇ.8ರಿಂದ ಶೇ.7.75ಕ್ಕೆ ಇಳಿಕೆ ಮಾಡಲಾಗಿದೆ.
|