ಎಕ್ಸ್‌ಚೇಂಜ್ ಆಫರ್ ಹೆಸರಿನಲ್ಲಿ ಕಂಪನಿಗಳು ಗ್ರಾಹಕರಿಂದ ವಾಪಸು ಪಡೆದುಕೊಳ್ಳುವ ವಸ್ತುಗಳಿಗೆ ಸುಣ್ಣ-ಬಣ್ಣ ಹಚ್ಚಿ ನಮಗೇ ಮರಳಿಸುತ್ತಾರೆ ಎಂದು ಹೇಳುವವರಿಗಿದು ಅಚ್ಚರಿಯ ಸುದ್ದಿ. ಅದೇ ರೀತಿ ಒಂದು ಲಕ್ಷ ಹಳೆ ವಾಚುಗಳನ್ನು ಪಡೆದುಕೊಂಡಿದ್ದ 'ಟೈಟಾನ್' ಇದೀಗ ಅವುಗಳನ್ನು ನಾಶ ಮಾಡಿದೆಯಂತೆ..! ಟೈಟಾನ್ ಕಂಪನಿಯು ಕಳೆದ ವರ್ಷ 'ಎಕ್ಸ್‌ಚೇಂಜ್ ಆಫರ್-2008' ಹೆಸರಿನಲ್ಲಿ ಸಹಸ್ರಾರು ಹಳೆಯ ವಾಚುಗಳನ್ನು ವಾಪಸು ಪಡೆದುಕೊಂಡು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಹೊಸ ವಾಚುಗಳನ್ನು ನೀಡಿತ್ತು. ಹಾಗೆ ಒಟ್ಟಾದ ವಾಚುಗಳನ್ನು ಎಲ್ಲೋ ಬಿಸಾಕುವ ಅಥವಾ ಮರು ಮಾರಾಟ ಮಾಡುವ ಬದಲು ಪರಿಸರ ಸ್ನೇಹಿಯಾಗಿ ನಾಶ ಮಾಡಲಾಗಿದೆ ಎಂದು ಕಂಪನಿಯ ಪ್ರಾಂತ್ಯ ವ್ಯವಸ್ಥಾಪಕ ಸಂಜಯ್ ಭಟ್ಟಚಾರ್ಜಿ ತಿಳಿಸಿದ್ದಾರೆ.ಕಳೆದ ಐದು ವರ್ಷಗಳ ಅವಧಿಯಲ್ಲಿ 20 ಲಕ್ಷಕ್ಕೂ ಹೆಚ್ಚು ಗ್ರಾಹಕರು ಎಕ್ಸ್‌ಚೇಂಜ್ ಮೇಳದಲ್ಲಿ ಭಾಗವಹಿಸಿದ್ದಾರೆ. ಗ್ರಾಹಕರ ವಲಯದಿಂದ ಕಂಪನಿಯು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚು ಪ್ರತಿಕ್ರಿಯೆ ಬಂದಿತ್ತು.ಇದೀಗ ಜುಲೈ 23ರಿಂದ ಒಂದು ತಿಂಗಳ ಕಾಲ ಮತ್ತೊಂದು ಎಕ್ಸ್‌ಚೇಂಜ್ ಕೊಡುಗೆಯನ್ನು ಟೈಟಾನ್ ಗ್ರಾಹಕರಿಗೆ ನೀಡಿದೆ. ಯಾವುದೇ ಕಂಪನಿಯ, ಯಾವುದೇ ಸ್ಥಿತಿಯಲ್ಲಿರುವ ಹಳೆ ವಾಚುಗಳನ್ನು ಟೈಟಾನ್ ಶೋರೂಂನಲ್ಲಿ ತಂದು ಕೊಟ್ಟಲ್ಲಿ ನಿಮಗೆ ಹೊಸ ವಾಚು ಖರೀದಿಯ ಮೇಲೆ ಶೇಕಡಾ 20ರ ರಿಯಾಯಿತಿ ನೀಡಲಾಗುತ್ತದೆ ಎಂದು ಕಂಪನಿ ಪ್ರಕಟಿಸಿದೆ.' ಹಳೆ ಪಾತ್ರೆ... ಹಳೆ ಪೇಪರ್.. ಹಳೆ ಕಬ್ಬಿಣ..' ಅಂತ ಬೀದಿ ಬೀದಿ ಸುತ್ತುವ ಮಂದಿಯಿನ್ನು ಆ ಪಟ್ಟಿಗೆ ವಾಚನ್ನು ಸೇರಿಸಿದರೂ ಅಚ್ಚರಿಯಿಲ್ಲ ಬಿಡಿ..! ಹಾಗಾಗಿ ಹಳೆ ವಾಚುಗಳನ್ನು ಕಟ್ಟಿಕೊಂಡಿದ್ದವರು ಇನ್ನು ತಡ ಮಾಡಬೇಕಿಲ್ಲ. |