ಇದೀಗ ಕನಿಷ್ಠ ಒಂದು ಮೊಬೈಲ್ ಆದರೂ ಇಲ್ಲದವರಿಲ್ಲ ಎಂಬುದನ್ನು ಕೆ.ಎಸ್.ಆರ್.ಟಿ.ಸಿ. ಕೂಡ ಕಂಡುಕೊಂಡಿದೆ. ಅದೇ ನಿಟ್ಟಿನಲ್ಲಿ ಅದು ಮೊಬೈಲ್ ಮೂಲಕ ಬಸ್ ಟಿಕೆಟ್ ಕಾದಿರಿಸುವ ವ್ಯವಸ್ಥೆಯನ್ನು ಪರಿಚಯಿಸುವತ್ತ ಮಹತ್ವದ ಹೆಜ್ಜೆಯನ್ನಿರಿಸುತ್ತಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ರಾಜ್ಯದಾದ್ಯಂತ ಮೊಬೈಲ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಶೀಘ್ರವೇ ಆರಂಭಿಸಲಿದೆ. ಸುಮಾರು 2,000 ಮಾರ್ಗಗಳಿಗೆ ಲಭ್ಯವಾಗುವಂತೆ ಮೊಬೈಲ್ ಟಿಕೆಟ್ ವ್ಯವಸ್ಥೆ ಮಾಡಲಾಗುತ್ತಿದೆ.
ಈಗ ಟಿಕೆಟ್ ಮಾರಾಟಗಾರರ ಜತೆ ಸಂಸ್ಥೆಯು ಮಾತುಕತೆ ನಡೆಸುತ್ತಿದ್ದು, ಯಾವ ಅಂತಿಮ ತೀರ್ಮಾನವನ್ನೂ ತೆಗೆದುಕೊಳ್ಳಲಾಗಿಲ್ಲ. ಆದರೆ ಈ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ಬರುವುದಂತೂ ಖಂಡಿತಾ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರು ಟಿಕೆಟ್ ಪೂರೈಕೆದಾರರಲ್ಲಿ ನೋಂದಣಿ ಮಾಡಿಕೊಂಡ ನಂತರ ಟಿಕೆಟ್‌ಗಳನ್ನು ಕಾದಿರಿಸಬಹುದಾಗಿದೆ. ಇಲ್ಲಿ ಆನ್‍ಲೈನ್ ಪಾವತಿ (ಕ್ರೆಡಿಟ್ ಕಾರ್ಡ್ ಅಥವಾ ಆನ್‌ಲೈನ್ ಖಾತೆ ಮೂಲಕ) ಮಾಡಬೇಕಾಗುತ್ತದೆ. ಎಸ್‌ಎಂಎಸ್ ಮೂಲಕ ಬಹುತೇಕ ಕಾರ್ಯಗಳು ನಡೆಯುತ್ತವೆ. ಅಂತಿಮವಾಗಿ ಸಂಸ್ಥೆ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕನಿಗೆ ನಂಬರ್ ಒಂದನ್ನು ನೀಡುತ್ತದೆ. ಅದನ್ನು ಬಳಸಿಕೊಂಡು ಪ್ರಯಾಣಕ್ಕೂ ಮೊದಲು ಬಸ್ ನಿಲ್ದಾಣದಲ್ಲಿ ಫ್ರಿಂಟ್ ಔಟ್ ತೆಗೆಸಿಕೊಂಡರಾಯಿತು. ಇನ್ನೇನು ಕೆಲವೇ ದಿನಗಳಲ್ಲಿ ಈ ವ್ಯವಸ್ಥೆಯ ಸಂಪೂರ್ಣ ವಿವರವನ್ನು ಕೆಎಸ್‌ಆರ್‌ಟಿಸಿ ಪ್ರಕಟಿಸಲಿದೆ.
ಸಿನಿಮಾ ಟಿಕೆಟ್ ಬುಕ್ಕಿಂಗ್ ಮತ್ತು ರೈಲ್ವೇ ಪಿಎನ್‌ಆರ್ ನಂಬರ್‌ಗಳನ್ನು ಮೊಬೈಲ್ ಮೂಲಕ ಪರಿಶೀಲನೆ ನಡೆಸುವ ವ್ಯವಸ್ಥೆಯನ್ನು ಆಧಾರವಾಗಿರಿಸಿಕೊಂಡು ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಪರಿಕ್ಷೆ ನಡೆಸಲಾಗುತ್ತಿದೆ.
ಮೊಬೈಲ್ ಟಿಕೆಟ್ ಬುಕ್ಕಿಂಗ್ ಮೂಲಕ ಸಾರ್ವಜನಿಕ ರಸ್ತೆ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬಹುದು ಮತ್ತು ಇನ್ನಷ್ಟು ಜನಪ್ರಿಯಗೊಳಿಸಬಹುದು ಎಂಬ ನಿರೀಕ್ಷೆ ಕೆಎಸ್‌ಆರ್‌ಟಿಸಿಯದ್ದು.
ಕೆಎಸ್‌ಆರ್‌ಟಿಸಿ ಈಗಾಗಲೇ ಇಂಟರ್ನೆಟ್ ಆನ್‌ಲೈನ್ ಬುಕ್ಕಿಂಗ್ ಸೇವೆಯಲ್ಲಿ ಹೆಸರುವಾಸಿ. ರಾಜ್ಯದಾದ್ಯಂತ 243 ರಿಸರ್ವೇಷನ್ ಏಜೆಂಟ್‌ಗಳನ್ನೂ ಸಂಸ್ಥೆ ಹೊಂದಿದೆ. ಪಕ್ಕದ ರಾಜ್ಯಗಳಲ್ಲಿ 40 ಏಜೆಂಟರಿದ್ದಾರೆ.
ಪ್ರಯಾಣಿಕರು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಸ್ವತಃ ಟಿಕೆಟ್ ಬುಕ್ಕಿಂಗ್ ಕೂಡ ಮಾಡಬಹುದು. ಅಲ್ಲಿ ಇಲ್ಲಿ ಅಲೆದಾಡುವ, ಅಂಗಲಾಚುವ ಅಗತ್ಯವಿಲ್ಲ ಎನ್ನುವುದು ಅಧಿಕಾರಿಗಳ ವಿವರಣೆ. ಟಿಕೆಟ್ ವ್ಯವಸ್ಥೆಯಲ್ಲಿ ಕ್ರಾಂತಿ ಮಾಡಲು ಹೊರಟಿರುವ ಕೆಎಸ್‌ಆರ್‌ಟಿಸಿಯದ್ದೀಗ ಅಗಾಧ ಭರವಸೆ.
|