ಸುರಕ್ಷತೆಯ ತಕರಾರು ತೆಗೆದಿದ್ದ ಐರೋಪ್ಯ ಒಕ್ಕೂಟದ ಒತ್ತಡಕ್ಕೆ ಮಣಿದ ಮೈಕ್ರೋಸಾಫ್ಟ್, ಆ ದೇಶಗಳಲ್ಲಿನ ವಿಂಡೋಸ್ ಆಪರೇಟಿಂಗ್ ಸಿಸ್ಟಂನಲ್ಲಿ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರನ್ನು ಪ್ರತ್ಯೇಕಗೊಳಿಸಲು ಒಪ್ಪಿಕೊಂಡಿದೆ.
ಆ ದೇಶಗಳ ಗ್ರಾಹಕರು ಇತರ ಯಾವುದೇ ಬ್ರೌಸರುಗಳನ್ನು ಸುಲಭವಾಗಿ ತಮ್ಮ ಕಂಪ್ಯೂಟರ್‌ಗಳಲ್ಲಿ ಡಿಫಾಲ್ಟ್ ಬ್ರೌಸರ್ ಆಗಿ ಸ್ಥಾಪಿಸಿಕೊಂಡು, ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರನ್ನು ನಿಷ್ಕ್ರಿಯಗೊಳಿಸಬಹುದು.
ಕಳೆದ ಹಲವಾರು ವರ್ಷಗಳಿಂದ ಮೈಕ್ರೋಸಾಫ್ಟ್ ಮತ್ತು ಐರೋಪ್ಯ ಒಕ್ಕೂಟಗಳ ನಡುವಿನ ವಿವಾದವು ಈ ಮೂಲಕ ಅಂತ್ಯಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಅಲ್ಲಿನ ಸುರಕ್ಷತಾ ನಿಯಮಗಳನ್ನು ಅಮೆರಿಕಾದ ಸಾಫ್ಟ್‌ವೇರ್ ದೈತ್ಯ ಉಲ್ಲಂಘಿಸಿದ ಕಾರಣಕ್ಕಾಗಿ 2.9 ಬಿಲಿಯನ್ ಅಮೆರಿಕನ್ ಡಾಲರ್‌ಗಳ ದಂಡವನ್ನು ಕೂಡ ಆಯೋಗ ವಿಧಿಸಿತ್ತು.
ಇದೀಗ ಮೈಕ್ರೋಸಾಫ್ಟ್ ತನ್ನ ವಿಂಡೋಸ್ 7 ಆಪರೇಟಿಂಗ್ ಸಿಸ್ಟಂನಲ್ಲಿ 'ಬಲ್ಲೋಟ್ ಸ್ಕ್ರೀನ್' ಅಳವಡಿಸಲಿದ್ದು, ಬಳಕೆದಾರರು ತಮಗೆ ಬೇಕಾದ ಬ್ರೌಸರನ್ನು ಡಿಫಾಲ್ಟ್ ಆಗಿ ಮಾಡಿಕೊಳ್ಳಬಹುದು ಮತ್ತು ಇಂಟರ್ನೆಟ್ ಎಕ್ಸ್‌ಪ್ಲೋರರ್‌ನ್ನು ತೆಗೆದು ಹಾಕಬಹುದಾಗಿದೆ.
ಮತ್ತೊಂದು ಮೂಲದ ಪ್ರಕಾರ ಯೂರೋಪ್ ದೇಶಗಳಲ್ಲಿನ ವಿಂಡೋಸ್ 7ನಲ್ಲಿ ಇಂಟರ್ನೆಟ್ ಎಕ್ಸ್‌ಪ್ಲೋರರ್ ಇರುವುದೇ ಇಲ್ಲ. ಗ್ರಾಹಕರು ಬೇಕೆಂದಾದಲ್ಲಿ ಇಂಟರ್ನೆಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬೇಕು ಅಥವಾ ಬೇರೆ ಕಂಪನಿಗಳ ಬ್ರೌಸರ್‌ಗಳನ್ನು ಬಳಸಲು ಅವಕಾಶವಿದೆ.
ಪ್ರಸಕ್ತ ವಿಂಡೋಸ್‌ನಲ್ಲಿ ಡಿಫಾಲ್ಟ್ ಸ್ಥಿತಿಯಲ್ಲಿರುವ ಇಂಟರ್ನೆಟ್ ಎಕ್ಸ್‌ಪ್ಲೋರರ್ ಸುರಕ್ಷತೆಯಿಂದ ಕೂಡಿಲ್ಲ. ವೈರಸ್ ಅಥವಾ ಹ್ಯಾಕರ್‌ಗಳು ಸುಲಭವಾಗಿ ಕಂಪ್ಯೂಟರ್‌ನಲ್ಲಿನ ಮಾಹಿತಿಗಳನ್ನು ಕದಿಯುವುದು ಅಥವಾ ನಾಶ ಮಾಡುವುದು ಸಾಧ್ಯವಾಗಿರುವುದರಿಂದ ಇತರ ಬ್ರೌಸರುಗಳೇ ಉತ್ತಮ ಎಂಬುದು ಯೂರೋಪಿಯನ್ ಆಯೋಗದ ಅಭಿಮತ.
ವಿಶ್ವದ ಇಂಟರ್ನೆಟ್ ಬಳಕೆದಾರರಲ್ಲಿ ಶೇಕಡಾ 60ರಷ್ಟು ಮಂದಿ ಬಳಸುತ್ತಿರುವುದು ವಿಂಡೋಸ್ ಎಕ್ಸ್‌ಪ್ಲೋರರ್‌ನ್ನು. ಶೇ.30ರಷ್ಟು ಗ್ರಾಹಕರು ಮೋಝಿಲಾದ ಫೈರ್‌ಫಾಕ್ಸ್, ಶೇ.4ರಷ್ಟು ಒಪೇರಾ ಹಾಗೂ ನಂತರದ ಸ್ಥಾನಗಳಲ್ಲಿ ಗೂಗಲ್ ಕ್ರೋಮ್ ಮತ್ತು ಆಪಲ್‌ನ ಸಫಾರಿಗಳಿವೆ.
|