ಆರ್ಥಿಕ ಸಂಕಷ್ಟಕ್ಕೆ ಏರ್ ಇಂಡಿಯಾದತ್ತ ಸಹಾಯ ಹಸ್ತ ವಿಸ್ತರಿಸಲು ನಿರ್ಧರಿಸಿರುವ ಕೇಂದ್ರ ಸರಕಾರವು, ಹಣಕಾಸು ಮತ್ತು ಪೆಟ್ರೋಲಿಯಂ ಸಚಿವಾಲಯವು ಸರಕಾರಿ ಸ್ವಾಮ್ಯದ ಏರ್‌ಲೈನ್ಸ್‌ಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಹೇಳಿದೆ.
ಏರ್ ಇಂಡಿಯಾಕ್ಕೆ ನೀಡಲಾಗಿರುವ ನೆರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಹಣಕಾಸು ಸಚಿವಾಲಯವು ಪರಿಶೀಲನೆ ನಡೆಸಬೇಕು ಮತ್ತು ಪೆಟ್ರೋಲಿಯಂ ಸಚಿವಾಲಯವು ಮೂರು ತಿಂಗಳ ಅವಧಿಯ ಸಾಲ ಮಿತಿಯನ್ನು ಹೆಚ್ಚಿಸಬೇಕು ಎಂದು ಸರಕಾರ ತಿಳಿಸಿದೆ.
ಏರ್ ಇಂಡಿಯಾದ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದನ್ನು ಪರಿಶೀಲನೆ ನಡೆಸುವ ಸಮಿತಿಯ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಂಪುಟ ಕಾರ್ಯದರ್ಶಿ ಕೆ.ಎಂ. ಚಂದ್ರಶೇಖರ್ ಇದರ ಅಧ್ಯಕ್ಷತೆ ವಹಿಸಿದ್ದರು.
ಶನಿವಾರ ಮೊತ್ತ ಮೊದಲ ಬಾರಿಗೆ ಸಭೆ ಸೇರಿದ್ದ ಈ ಸಮಿತಿಯು, ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ವಿಮಾನಯಾನ ಸಂಸ್ಥೆಯಲ್ಲಿ ಯಾವ ರೀತಿ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಬಹುದು ಮತ್ತು ಆದಾಯ ಹೆಚ್ಚಿಸಬಹುದು ಎಂಬ ಕುರಿತು ಚರ್ಚೆ ನಡೆಸಿತು.
ಖರ್ಚು ವೆಚ್ಚಗಳ ಪರಿಶೀಲನೆಗಾಗಿ ಏರ್ ಇಂಡಿಯಾದ ಪೋಷಕ ಸಂಸ್ಥೆ 'ಭಾರತೀಯ ವೈಮಾನಿಕ ಸಂಸ್ಥೆ' (ಎನ್.ಎ.ಸಿ.ಐ.ಎಲ್.)ಯು ವೆಚ್ಚ ಪರಿಶೀಲಕರನ್ನು ನೇಮಕಗೊಳಿಸುವಂತೆ ಕೇಳಿಕೊಂಡಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವೆಚ್ಚ ಕಡಿತ ಪ್ರಕ್ರಿಯೆಯ ನಿರ್ವಹಣೆಯು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ದಿನವಹೀ ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಲೆಕ್ಕ ಪರಿಶೋಧಕರದ್ದಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಆರ್ಥಿಕ ವರ್ಷದಲ್ಲಿ ಈ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯು ಅಂದಾಜು 7,200 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದೆ ಎನ್ನಲಾಗಿದೆ.
ಹಣಕಾಸು ಸಚಿವಾಲಯವು ಎನ್‌ಎಸಿಐಎಲ್‌ಗೆ ನೆರವು ವಿಸ್ತರಿಸುವ ಬಗ್ಗೆ ಪರಿಶೀಲನೆ ನಡೆಸಬೇಕು. ಆ ಮೂಲಕ ಏರ್‌ಲೈನ್ಸ್ ಆರ್ಥಿಕ ಸಂಕಷ್ಟದಿಂದ ಹೊರ ಬರಲು ಸಹಕಾರ ನೀಡಬೇಕು ಎಂಬ ನಿರ್ಧಾರವನ್ನೂ ಇದೇ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
|