ಏನೂ ಇಲ್ಲ ಎನ್ನುವ ಸಂದರ್ಭದಲ್ಲಿ ತಾನು ಅಪರೂಪಕ್ಕೆ ಒಮ್ಮೊಮ್ಮೆ ಸಾಮಾಜಿಕ ಸಂವಹನ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವಾಗ ತೀರಾ ಕಿರಿಕಿರಿಯ ಅನುಭವವಾಗುತ್ತದೆ ಎಂದು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ತಿಳಿಸಿದ್ದಾರೆ.
"ನಾನು 24 ಗಂಟೆಗಳ ಕಾಲವೂ ತಂತ್ರಜ್ಞಾನದಲ್ಲಿ ಮುಳುಗಿರುವ ವ್ಯಕ್ತಿ" ಎಂದು ಪತ್ನಿ ಮೆಲಿಂದಾ ಜತೆಗಿದ್ದ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಟೆಸ್ಟ್ ಮೆಸೇಜು ಬರೆಯುವುದರಲ್ಲಿ ನನಗೆ ಹೆಚ್ಚಿನ ಆಸಕ್ತಿಯಿಲ್ಲ. ಆದರೆ ಹದಿ ಹರೆಯದವರು ಅದನ್ನು ಮಾಡುವುದನ್ನು ನೋಡಿ ಪ್ರಭಾವಿತನಾಗಿದ್ದೇನೆ ಎಂದು ತಂತ್ರಜ್ಞಾನ ಕುರಿತ ಸಮಾವೇಶವೊಂದರ ನಂತರ ಮಾತನಾಡುತ್ತಾ ಅವರು ತಿಳಿಸಿದ್ದಾರೆ.
ಅದೇ ಹೊತ್ತಿಗೆ ತಾನು ಪುರುಸೊತ್ತಲ್ಲಿದ್ದೇನೆ ಎಂಬ ಭಾವನೆ ಬಂದಾಗ ಯಾವುದಾದರೂ ಲೇಖನಗಳನ್ನು ಓದುವುದಾಗಿಯೂ ಹೇಳಿಕೊಂಡರು.
ಸಾಮಾಜಿಕ ಸಂವಹನ ವೆಬ್‌ಸೈಟ್‌ಗಳನ್ನು 'ಕಿರಿಕಿರಿ' ಎಂದೇ ಸಂಬೋಧಿಸಿದ ಗೇಟ್ಸ್, ತನಗೆ ಪೇಸ್‌ಬುಕ್‌ನಿಂದ ಪ್ರತಿ ದಿನ ಸ್ನೇಹದ ಆಹ್ವಾನ ರಾಶಿ ರಾಶಿ ಬರುತ್ತದೆ ಎಂಬ ಕುತೂಹಲಕಾರಿ ಅಂಶವನ್ನೂ ಹೊರಗೆಡವಿದ್ದಾರೆ.
"ನಾನು ಪ್ರತೀ ದಿನ 10,000 ಸ್ನೇಹಕ್ಕಾಗಿನ ಆಹ್ವಾನವನ್ನು ಸ್ವೀಕರಿಸುತ್ತಿದ್ದೇನೆ. ಇದರಿಂದ ತೀರಾ ಕಿರಿಕಿರಿಯಾಗುತ್ತಿದೆ" ಎಂದರು.
ಇದೇ ಸಂದರ್ಭದಲ್ಲಿ ಜತೆಗಿದ್ದ ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಸಚಿವಾಲಯದ ರಾಜ್ಯ ಸಚಿವ ಸಚಿನ್ ಪೈಲಟ್‌ರವರು ಗೇಟ್ಸ್ ಹೇಳಿಕೆಗೆ ಹಾಸ್ಯ ಧಾಟಿಯಲ್ಲಿ, "ಪೇಸ್‌ಬುಕ್‌ನಲ್ಲೀಗ ಎಷ್ಟು ಮಂದಿ ಬಿಲ್ ಗೇಟ್ಸ್‌ಗಳಿದ್ದಾರೆ?" ಎಂದು ಪ್ರಶ್ನಿಸಿದರು.
|