ರೈತರ ಆತ್ಮಹತ್ಯೆ ವಿಚಾರದಲ್ಲಿ ಇತರೆಲ್ಲಾ ರಾಜ್ಯಗಳನ್ನು ಮೀರಿ ನಿಂತಿರುವ ಕರ್ನಾಟಕವು ಕಳೆದೊಂದು ವರ್ಷದಲ್ಲಿ 113 ರೈತರ ಆತ್ಮಹತ್ಯೆಗಳಿಗೆ ಸಾಕ್ಷಿಯಾಗಿದೆ ಎಂದು ಕೇಂದ್ರ ಕೃಷಿ ಮತ್ತು ಆಹಾರ ಸಚಿವ ಶರದ್ ಪವಾರ್ ತಿಳಿಸಿದ್ದಾರೆ.
ರಾಜ್ಯ ಸಭೆಯಲ್ಲಿ ಮಹಾರಾಷ್ಟ್ರದ ಅನಂತ್ ಶರದ್ ಜೋಷಿಯವರು ಸಾಲ ಮನ್ನಾ ಕುರಿತು ಕೇಳಿದ್ದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರಿಸಿರುವ ಪವಾರ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ರೈತರ ಆತ್ಮಹತ್ಯೆ ಪ್ರಕರಣದಲ್ಲಿ ನಂ.1 ಸ್ಥಾನ ಕರ್ನಾಟಕದ್ದು. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ, ಪಂಜಾಬ್, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡುಗಳಿವೆ.
ಮಹಾರಾಷ್ಟ್ರದಲ್ಲಿ 2009ರ ಜೂನ್ 18ರ ತನಕ 71 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2009ರ ಪ್ರಸಕ್ತ ತಿಂಗಳಿನವರೆಗೆ ಪಂಜಾಬ್‌ನಲ್ಲಿ 11 ಮಂದಿ, ಆಂಧ್ರಪ್ರದೇಶದಲ್ಲಿ ಜೂನ್ ತನಕ ನಾಲ್ವರು, ಕೇರಳದಲ್ಲಿ ಮೇ ತನಕ ಮತ್ತು ತಮಿಳುನಾಡಿನಲ್ಲಿ 2008ರ ಡಿಸೆಂಬರ್‌ವರೆಗೆ ತಲಾ ಒಬ್ಬೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಚಿವರು ತನ್ನ ಉತ್ತರದಲ್ಲಿ ತಿಳಿಸಿದ್ದಾರೆ.
ಈ ಹಿಂದಿನ 2006ರಿಂದ ಇತ್ತೀಚಿನ ವರ್ಷಗಳವರೆಗೆ ಹೋಲಿಸಿದರೆ 2008-09ರ ಅವಧಿಯಲ್ಲಿ ಮಹಾರಾಷ್ಟ್ರದ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಮಾಣದಲ್ಲಿ ಕುಸಿತ ಕಂಡಿದೆ. ರೈತರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರಕಾರ ತಕ್ಕ ಕ್ರಮಗಳನ್ನು ರೂಪಿಸಿದೆ ಎಂದು ಪವಾರ್ ವಿವರಣೆ ನೀಡಿದರು.
ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಕೇರಳ ರಾಜ್ಯಗಳ 31 ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಗುರುತಿಸಲಾಗಿದ್ದು, ಅಲ್ಲಿಗೆ ಪುನಶ್ಚೇತನ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.
|