ಜುಲೈ ತಿಂಗಳಲ್ಲಿ ಬಾಗಿಲು ಮುಚ್ಚಿದ ಏಳು ಬ್ಯಾಂಕುಗಳೂ ಸೇರಿದಂತೆ ಅಮೆರಿಕಾದಲ್ಲಿ ಈ ವರ್ಷ ಇದುವರೆಗೆ ಟಾಟಾ ಹೇಳಿದ ಬ್ಯಾಂಕುಗಳ ಸಂಖ್ಯೆ 64ಕ್ಕೇರಿದೆ.
ಸರಾಸರಿ ಲೆಕ್ಕದಲ್ಲಿ ಹೇಳುವುದಾದರೆ ಜಾಗತಿ ಆರ್ಥಿಕ ಕೇಂದ್ರ ರಾಷ್ಟ್ರದಲ್ಲಿ ಪ್ರತಿ ತಿಂಗಳೂ ಒಂಬತ್ತು ಬ್ಯಾಂಕುಗಳು ವಿಳಾಸ ಕಳೆದುಕೊಳ್ಳುತ್ತಿವೆ.
ದೇಶದ ಹಣಕಾಸು ಸ್ಥಿತಿ ಹದಗೆಟ್ಟಿರುವುದನ್ನು ಪ್ರತಿಬಿಂಬಿಸುತ್ತಿರುವ ಬ್ಯಾಂಕುಗಳ ಮುಳುಗಡೆಯು ಈ ವರ್ಷ ಕಳೆದ ವರ್ಷದ ಎರಡರಷ್ಟಾಗಿದೆ. 2008ರಲ್ಲಿ ಒಟ್ಟು 25 ಬ್ಯಾಂಕುಗಳು ವ್ಯವಹಾರ ಸ್ಥಗಿತಗೊಳಿಸಿದ್ದವು.
ಜುಲೈ ತಿಂಗಳಲ್ಲಿ ಒಟ್ಟು 19 ಬ್ಯಾಂಕುಗಳು ವ್ಯವಹಾರದಲ್ಲಿ ವೈಫಲ್ಯತೆಯನ್ನು ಅನುಭವಿಸಿದ್ದರೂ ಏಳು ಬ್ಯಾಂಕುಗಳು ಮಾತ್ರ ವ್ಯವಹಾರ ನಿಲ್ಲಿಸಿವೆ. ಜುಲೈ 24ರಂದು ಈ ಬ್ಯಾಂಕುಗಳು ಮುಳುಗಡೆ ಘೋಷಿಸಿವೆ ಎಂದು ವರದಿಗಳು ತಿಳಿಸಿವೆ.
ಇವುಗಳಲ್ಲಿ ಆರು ಬ್ಯಾಂಕುಗಳು ಜಾರ್ಜಿಯಾದ ಸೆಕ್ಯುರಿಟಿ ಬ್ಯಾಂಕ್ ಕಾರ್ಪೊರೇಷನ್‌ನ ಅಂಗ ಸಂಸ್ಥೆಗಳಾಗಿವೆ. ಸೆಕ್ಯುರಿಟಿ ಬ್ಯಾಂಕ್ ಆಫ್ ಬಿಬ್ ಕಂಟ್ರಿ, ಸೆಕ್ಯುರಿಟಿ ಬ್ಯಾಂಕ್ ಆಫ್ ಹೌಸ್ಟನ್ ಕಂಟ್ರಿ, ಸೆಕ್ಯುರಿಟಿ ಬ್ಯಾಂಕ್ ಆಫ್ ಜಾನ್ಸ್ ಕಂಟ್ರಿ, ಸೆಕ್ಯುರಿಟಿ ಬ್ಯಾಂಕ್ ಆಫ್ ಗ್ವಿನೆಟ್ ಕಂಟ್ರಿ, ಸೆಕ್ಯುರಿಟಿ ಬ್ಯಾಂಕ್ ಆಫ್ ನಾರ್ತ್ ಮೆಟ್ರೋ ಮತ್ತು ಸೆಕ್ಯುರಿಟಿ ಬ್ಯಾಂಕ್ ಆಫ್ ನಾರ್ತ್ ಫುಲ್ಟಾನ್ ಬಾಗಿಲು ಮುಚ್ಚಿರುವ ಬ್ಯಾಂಕುಗಳು.
ಮುಚ್ಚಿರುವ ಮತ್ತೊಂದು ಬ್ಯಾಂಕ್ ವಾಟರ್ಫೋರ್ಡ್ ವಿಲೇಜ್ ಬ್ಯಾಂಕ್. 58 ಮಿಲಿಯನ್ ಡಾಲರ್‌ಗಳ ಠೇವಣಿ ಹೊಂದಿರುವ ಈ ಬ್ಯಾಂಕ್ 61.4 ಮಿಲಿಯನ್ ಡಾಲರ್‌ಗಳ ಆಸ್ತಿ ಹೊಂದಿದೆ.
|