ಕಳೆದ ವರ್ಷ 7200 ಕೋಟಿ ರೂ. ನಷ್ಟ ಅನುಭವಿಸಿದ ಏರ್ ಇಂಡಿಯಕ್ಕೆ ನೆರವು ನೀಡುವಂತೆ ಹಣಕಾಸು ಮತ್ತು ಪೆಟ್ರೋಲಿಯಂ ಸಚಿವಾಲಯಗಳಿಗೆ ಸರ್ಕಾರ ಶನಿವಾರ ತಿಳಿಸಿದೆ. ಕ್ಯಾಬಿನೆಟ್ ಕಾರ್ಯದರ್ಶಿ ಕೆ.ಎಂ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ನೆರವಿನ ಮೊತ್ತವನ್ನು ಪರಿಶೀಲಿಸುವಂತೆ ವಿತ್ತಸಚಿವಾಲಯಕ್ಕೆ ತಿಳಿಸಿದ್ದು, ಪ್ರತಿ ತ್ರೈಮಾಸಿಕದಲ್ಲಿ ಏರ್ ಇಂಡಿಯ ಯೋಜನೆ ಪುನರ್ಪರಿಶೀಲಿಸುವಂತೆ ಸೂಚಿಸಿದೆ.
ಜೆಟ್ ಇಂಧನದ ಸಾಲದ ಮಿತಿಯನ್ನು ಕನಿಷ್ಠ 3 ತಿಂಗಳವರೆಗೆ ವಿಸ್ತರಿಸುವಂತೆ ಪೆಟ್ರೋಲಿಯಂ ಸಚಿವಾಲಯಕ್ಕೆ ಕೂಡ ತಿಳಿಸಲಾಗಿದೆ. ಏರ್ ಇಂಡಿಯ ವಿಮಾನಗಳ ಖರೀದಿಯಿಂದಾಗಿ ಸಾಲ ತೀರಿಸಲು 17,000 ಕೋಟಿ ರೂ. ದುಡಿಯುವ ಬಂಡವಾಳದ ಸಾಲ ಪಡೆದಿದೆ. ಕಾರ್ಯದರ್ಶಿಗಳ ಸಮಿತಿಗೆ ಮನವಿ ಸಲ್ಲಿಸಿರುವ ಏರ್‌ಇಂಡಿಯ 3000 ಕೋಟಿ ರೂ. ಹೊಸ ಸಾಲ ಮಂಜೂರು ಮಾಡಬೇಕೆಂದು ತಿಳಿಸಿದೆ.
ಸಭೆಯ ಬಳಿಕ ಮಾತನಾಡಿದ ಏರ್ ಇಂಡಿಯ ಸಿಎಂಡಿ ಅರ್ವಿನ್ ಜಾಧವ್, ಸರ್ಕಾರ ನಮಗೆ ಒತ್ತಾಸೆಯಾಗಿದ್ದು, ಏರ್ ಇಂಡಿಯ ಬೆಳವಣಿಗೆ ಮತ್ತು ವೆಚ್ಚ ಉಳಿಸುವ ಯೋಜನೆಗೆ ಪೂರ್ಣ ಬೆಂಬಲ ನೀಡುತ್ತದೆಂದು ಭರವಸೆ ವ್ಯಕ್ತಪಡಿಸಿದರು. |