2013ರ ವೇಳೆಗೆ ವಿಶ್ವದಾದ್ಯಂತ ಇಂಟರ್ನೆಟ್ ಬಳಸುವವರ ಸಂಖ್ಯೆಯು 220 ಕೋಟಿ ತಲುಪುವ ನಿರೀಕ್ಷೆಯಿದ್ದು, ಆನ್‌ಲೈನ್ ಸಂದಣಿಯಲ್ಲಿ ಭಾರತವು ಜಗತ್ತಿನಲ್ಲೇ ಮೂರನೇ ಸ್ಥಾನ ಪಡೆದುಕೊಳ್ಳಲಿದೆ ಎಂದು ವರದಿಯೊಂದು ತಿಳಿಸಿದೆ.
ಪ್ರಸಕ್ತ ಹೊಂದಿರುವ ಇಂಟರ್ನೆಟ್ ಬಳಕೆದಾರರ ಸಂಖ್ಯೆಯಲ್ಲಿ 2013ರ ವೇಳೆಗೆ ಶೇ.45ರಷ್ಟು ಏರಿಕೆಯಾಗುವ ಮೂಲಕ 220 ಕೋಟಿ ಗ್ರಾಹಕರನ್ನು ಪಡೆದುಕೊಳ್ಳಲಿದೆ. ಇದರಲ್ಲಿ ಏಷಿಯಾವೇ ಪ್ರಬಲವಾಗಿ ಮೂಡಿ ಬರಲಿದೆ. ಭಾರತವು ಜಗತ್ತಿನಲ್ಲಿ ಗರಿಷ್ಠ ಇಂಟರ್ನೆಟ್ ಬಳಸುವ ದೇಶಗಳ ಸಾಲಿನಲ್ಲಿ ಮೂರನೇ ಸ್ಥಾನ ಪಡೆದುಕೊಳ್ಳಲಿದೆ. ಮೊದಲೆರಡು ಸ್ಥಾನಗಳು ಕ್ರಮವಾಗಿ ಚೀನಾ ಮತ್ತು ಅಮೆರಿಕಾ ಪಾಲಾಗಲಿದೆ ಎಂದು ತಂತ್ರಜ್ಞಾನ ಮತ್ತು ಮಾರುಕಟ್ಟೆ ಅಧ್ಯಯನ ಕ್ಷೇತ್ರದ 'ಫಾರೆಸ್ಟರ್ ರೀಸರ್ಚ್' ತನ್ನ ವರದಿಯಲ್ಲಿ ವಿವರಿಸಿದೆ.
2008ರ ವೇಳೆಯಲ್ಲಿ ಜಾಗತಿಕ ಇಂಟರ್ನೆಟ್ ಬಳಕೆದಾರರ ಸಂಖ್ಯೆ 150 ಕೋಟಿ ತಲುಪಿತ್ತು. ಅಂದರೆ ಐದು ವರ್ಷಗಳಲ್ಲಿ 70 ಕೋಟಿ ಬಳಕೆದಾರರನ್ನು ಇಂಟರ್ನೆಟ್ ಪಡೆಯಲಿದೆ ಎಂದು ಅಂದಾಜಿಸಲಾಗಿದೆ.
ಭಾರತವು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಕಾರಣ 2013ರ ವೇಳೆಗೆ ಶೇಕಡಾ 10ರಿಂದ 20ರಷ್ಟು ಪ್ರಗತಿ ಕಾಣಲಿದೆ ಎಂದು ಸಂಸ್ಥೆ ತಿಳಿಸಿದೆ.
"ಏಷ್ಯಾದಲ್ಲಿ ಹೊರ ಹೊಮ್ಮುತ್ತಿರುವ ಮಾರುಕಟ್ಟೆಗಳಾದ ಚೀನಾ, ಭಾರತ ಮತ್ತು ಇಂಡೋನೇಷಿಯಾಗಳು 2008ರಿಂದ 2013ರ ಐದು ವರ್ಷಗಳ ಅವಧಿಯಲ್ಲಿ ಶೇ.10ರಿಂದ 20ರ ವಾರ್ಷಿಕ ಸರಾಸರಿ ಬೆಳವಣಿಗೆ ಕಾಣಲಿವೆ" ಎಂದು ವರದಿ ತಿಳಿಸಿದೆ.
2008ರಲ್ಲಿ ಭಾರತವು ಅಂದಾಜು 5.20 ಕೋಟಿ ಇಂಟರ್ನೆಟ್ ಬಳಕೆದಾರರನ್ನು ಹೊಂದಿತ್ತು ಎಂದು ಅಂದಾಜಿಸಲಾಗಿದೆ.
ಅಧ್ಯಯನ ವರದಿಯ ಪ್ರಕಾರ ಏಷಿಯಾದಲ್ಲಿನ ಇಂಟರ್ನೆಟ್ ಬಳಕೆದಾರರ ಸಂಖ್ಯೆಯ ಪ್ರಗತಿಯಲ್ಲಿ 2008ರಲ್ಲಿನ ಶೇ.38ರಿಂದ ಶೇ.43ಕ್ಕೆ ಏರಿಕೆಯಾಗಲಿದೆ.
ಚೀನಾವನ್ನು ಹೊರತುಪಡಿಸಿಯೂ ಭಾರತ, ಇಂಡೋನೇಷಿಯಾ, ಪಾಕಿಸ್ತಾನ ಮತ್ತು ಫಿಲಿಪೈನ್ಸ್‌ಗಳು ಕೂಡ ಅಗಾಧ ಪ್ರಮಾಣದ ಇಂಟರ್ನೆಟ್ ಬಳಕೆದಾರರನ್ನು ಆಕರ್ಷಿಸಲಿವೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.
|