ಇನ್ನು ಮುಂದೆ ನೀವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಯಾವುದಾದರೂ ಖರೀದಿಗೆ ಪಾವತಿ ಮಾಡಲು ಹೊರಟಿರುವಿರಾದರೆ ಜತೆಗೆ ಫೋಟೋ ಗುರುತಿನ ಚೀಟಿಯನ್ನೂ ಇಟ್ಟುಕೊಂಡಿರಿ. ಯಾಕೆಂದರೆ ಕಾರ್ಡ್ ಮೂಲಕ ಮೋಸದ ವ್ಯವಹಾರ ನಡೆಸುವುದನ್ನು ತಪ್ಪಿಸಲು ಗರಿಷ್ಟ ಮೌಲ್ಯದ ವಸ್ತುಗಳ ಖರೀದಿ ಸಂದರ್ಭದಲ್ಲಿ ವರ್ತಕರು ಗ್ರಾಹಕರ ಗುರುತು ಚೀಟಿಗಾಗಿ ಬೇಡಿಕೆಯಿಡಬೇಕು ಎಂದು ಬ್ಯಾಂಕುಗಳು ಸೂಚನೆ ನೀಡಿವೆ.
ದೇಶದಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳ ಬಳಕೆ ಹೆಚ್ಚುತ್ತಿದ್ದಂತೆ, ಅದರಲ್ಲಿ ಮೋಸ ಮಾಡುವವರ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಿದೆ. ಪ್ರಸಕ್ತ ಅಂದಾಜು ಐದು ಕೋಟಿ ಕ್ರೆಡಿಟ್ ಕಾರ್ಡ್‌ಗಳ ಬಳಕೆ ದೇಶದಲ್ಲಿದೆ. ಸರಿಸುಮಾರು 30 ಕೋಟಿ ಡೆಬಿಟ್ ಕಾರ್ಡ್‌ಗಳನ್ನೂ ಬಳಸಲಾಗುತ್ತಿದೆ. ಪ್ರತೀ ತಿಂಗಳೂ ಸರಾಸರಿ 2,000 ಮೋಸದ ಪ್ರಕರಣಗಳೂ ಬೆಳಕಿಗೆ ಬರುತ್ತಿವೆ.
ಕಾರ್ಡುಗಳು ಕಳ್ಳತನವಾದಾಗ ಅಥವಾ ಕಳೆದುಕೊಂಡಾಗ ಅಥವಾ ಬೇರೆ ಕಾರಣಗಳಿಂದ ದೊರೆತ ಕಾರ್ಡುಗಳ ಬಳಕೆದಾರನಂತೆ ನಟಿಸಿ ಮೋಸ ಮಾಡುವವರನ್ನು ಪತ್ತೆ ಹಚ್ಚಲು ಬ್ಯಾಂಕುಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ.
ಅದರ ಪ್ರಕಾರ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡುದಾರರೊಂದಿಗೆ ವ್ಯವಹರಿಸುವಾಗ ಅಂಗಡಿಗಳವರು ಫೋಟೋ ಗುರುತು ಚೀಟಿಗಳಾದ ಪಾನ್ ಕಾರ್ಡ್, ಪಾಸ್‌ಪೋರ್ಟ್ ಅಥವಾ ಚುನಾವಣಾ ಗುರುತಿನ ಚೀಟಿಯೊಂದಿಗೆ ವ್ಯಕ್ತಿಯನ್ನು ಹೋಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ಬ್ಯಾಂಕುಗಳು ಸೂಚಿಸಿವೆ.
ದೇಶದಲ್ಲಿನ ಖಾಸಗಿ ವಲಯದ ಅತಿ ದೊಡ್ಡ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ಕೂಡ ಇದೇ ಸೂಚನೆಯನ್ನು ತನ್ನ ಗ್ರಾಹಕರಿಗೆ ನೀಡಿದೆ. ದೇಶದಲ್ಲಿ ಅತೀ ಹೆಚ್ಚು ಕ್ರೆಡಿಟ್ ಕಾರ್ಡ್ ಗ್ರಾಹಕರನ್ನು ಹೊಂದಿದ ಹೆಗ್ಗಳಿಕೆಯೂ ಈ ಬ್ಯಾಂಕಿನದು. ದೊಡ್ಡ ಮೊತ್ತದ ವ್ಯವಹಾರ ಮಾಡುವ ಸಂದರ್ಭದಲ್ಲಿ ಫೋಟೋ ಗುರುತಿನ ಚೀಟಿಯನ್ನು ವ್ಯಾಪಾರಿಗಳಿಗೆ ತೋರಿಸಬೇಕಾದ ಅಗತ್ಯವಿದೆ ಎಂದು ಅದು ಗ್ರಾಹಕರಿಗೆ ಮನವಿ ಮಾಡಿಕೊಂಡಿದೆ.
2008ರ ಏಪ್ರಿಲ್‌ನಿಂದ ಡಿಸೆಂಬರ್ ಅವಧಿಯಲ್ಲಿ ಕೇವಲ ಐಸಿಐಸಿಐ ಬ್ಯಾಂಕ್‌ವೊಂದರ ಕ್ರೆಡಿಟ್ ಕಾರ್ಡ್‌ನಿಂದಲೇ ಮೋಸ ಹೋದ 8,000 ಪ್ರಕರಣಗಳು (11 ಕೋಟಿ ಮೊತ್ತ) ವರದಿಯಾಗಿವೆ ಎಂದು ಫೆಬ್ರವರಿಯಲ್ಲಿ ಸರಕಾರವು ಲೋಕಸಭೆಗೆ ಮಾಹಿತಿ ನೀಡಿತ್ತು.
ಗುರುತು ಚೀಟಿಯ ಅಗತ್ಯತೆಯ ಸೂಚನೆಯನ್ನು ಅಮೆರಿಕನ್ ಎಕ್ಸ್‌ಪ್ರೆಸ್, ಸಿಟಿ ಬ್ಯಾಂಕ್, ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಡ್ಯೂಟ್ಚೆ ಬ್ಯಾಂಕ್, ಎಚ್‌ಡಿಎಫ್‌ಸಿ ಮುಂತಾದ ಬ್ಯಾಂಕುಗಳು ಗ್ರಾಹಕರಿಗೆ ತಲುಪಿಸಿವೆ ಎಂದು ವರದಿಗಳು ತಿಳಿಸಿವೆ.
|