ಗೆಳೆಯರ ಜತೆಗೋ ಅಥವಾ ಇನ್ಯಾರ ಜತೆಗೋ ಗುಂಡು ಪಾರ್ಟಿ ಮುಗಿಸಿ ತಮ್ಮ ವಾಹನವನ್ನು ಚಲಾಯಿಸುತ್ತಾ ಮನೆಗೆ ವಾಪಸಾಗುವಾಗ ಪೊಲೀಸರು ಸಿಕ್ಕಿದರೆ ಬಾಯಿ ಮೂಸಿ ಜೈಲಿಗೆ ತಳ್ಳುತ್ತಾರೆ ಎನ್ನುವ ಭಯವಿದ್ದವರಿಗೆ ಸಹಾಯ ಮಾಡಲೆಂದು ಒಂದು ಸಂಸ್ಥೆ ಹುಟ್ಟಿಕೊಂಡಿದೆ. 'ನೀವು ಬೇಕಾದಷ್ಟು ಕುಡೀರಿ, ನಾವು ವಾಹನ ಚಲಾಯಿಸುತ್ತೇವೆ' ಎನ್ನುವುದೇ ಅವರ ಘೋಷ ವಾಕ್ಯ.
ಮುಂಬೈಯಲ್ಲಿ ಕುಡಿದು ವಾಹನ ಚಲಾಯಿಸಿ ಅನಾಹುತಗಳನ್ನು ಮಾಡಿಕೊಂಡ ಹಲವಾರು ಪ್ರಕರಣಗಳು 2008ರಲ್ಲಿ ನಡೆದ ನಂತರ ಅಲ್ಲಿನ ಪೊಲೀಸರು ಕಠಿಣ ಕ್ರಮಗಳಿಗೆ ಮುಂದಾಗುತ್ತಿದ್ದಾರೆ. ಗುಂಡು ಹಾಕಿ ವಾಹನ ಚಲಾಯಿಸಿದವರಿಗೀಗ 2,000 ರೂಪಾಯಿ ದಂಡದ ಜತೆಗೆ ಜೈಲಿನ ಆತಿಥ್ಯವೂ ಕಟ್ಟಿಟ್ಟ ಬುತ್ತಿ.
ಇದರಿಂದಾಗಿ ಪಾರ್ಟಿಗಳಿಗೆ ಹೋಗುವವರಿಗೆ, ಕ್ಲಬ್‌ಗಳಲ್ಲಿ ಕಾಲ ಕಳೆಯುವವರಿಗೆ ಮಾತ್ರ ತೊಂದರೆಯಾಗಿದ್ದಲ್ಲ. ಬಾರ್, ರೆಸ್ಟೋರೆಂಟ್, ಪಬ್ ಮಾಲಕರು ಕೂಡ ಸಿಕ್ಕಾಪಟ್ಟೆ ನಷ್ಟ ಅನುಭವಿಸಿದ್ದಾರಂತೆ.
ಇದನ್ನೆಲ್ಲ ಮನಗಂಡ ನಗರದ ಮೂವರು ಯುವಕರು ಒಟ್ಟಾಗಿ ಹೊಸ ಉಪಾಯವೊಂದನ್ನು ಕಂಡುಕೊಂಡರು. ಶಾಲಾ ದಿನಗಳಿಂದಲೇ ಜತೆಯಾಗಿದ್ದ ಅಂಕುರ್ ವೈದ್, ಸೌರಭ್ ಶಾಹ್ ಮತ್ತು ಮಿಶಾಲ್ ರಹೇಜಾ ಎಂಬುವವರು ಆಲ್ಕೋಹಾಲ್ ಸೇವಿಸಿದವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಸಲುವಾಗಿ ಸಂಸ್ಥೆಯೊಂದನ್ನೇ ಆರಂಭಿಸಿಬಿಟ್ಟರು.
ಆ ಸಂಸ್ಥೆಯ ಹೆಸರು 'ಪಾರ್ಟಿ ಹಾರ್ಡ್ ಡ್ರೈವರ್ಸ್' ಅಥವಾ ಪಿಎಚ್‌ಡಿ. ತಾವೂ ಬದುಕುವುದರೊಂದಿಗೆ ಇತರರನ್ನೂ ಬದುಕಲು ಬಿಡಿ ಎನ್ನುವುದರೊಂದಿಗೆ 2007ರ ಡಿಸೆಂಬರ್‌ನಲ್ಲಿ ಆರಂಭವಾದ ತ್ರಿಮೂರ್ತಿಗಳ ಕಾರ್ಯಕ್ಕೆ ಭರ್ಜರಿ ಪ್ರತಿಕ್ರಿಯೆ ಬಂದಿದೆಯಂತೆ.
ಪಿಎಚ್‌ಡಿ ಸಂಸ್ಥೆಯು 24 ಗಂಟೆಗಳ ಸೇವೆಯನ್ನು ಗ್ರಾಹಕರಿಗೆ ಒದಗಿಸುತ್ತದೆ. ರಾತ್ರಿ ಪಾರ್ಟಿ ಇರುವುದಾದರೆ, ಗ್ರಾಹಕರು ಮುಂಚಿತವಾಗಿ ಫೋನ್ ಮಾಡಿ ಡ್ರೈವರ್‌ಗಳನ್ನು ಕಾದಿರಿಸಬೇಕು. ಪೊಲೀಸರಿಗೆ 2,000 ರೂಪಾಯಿ ಕೊಟ್ಟು 'ಮಾವನ ಮನೆ'ಯ ಸತ್ಕಾರ ಸ್ವೀಕರಿಸುವುದಕ್ಕಿಂತ ನಮ್ಮ ಸೇವೆ ಪಡೆಯಿರಿ, ಅದರ ಅರ್ಧವೂ ನಮಗೆ ಬೇಡ ಎನ್ನುವುದು ಕಂಪನಿಯ ಹಿತವಚನ.
40 ಜನ ಚಾಲಕರನ್ನಿಟ್ಟುಕೊಂಡು ಆರಂಭಿಸಿದ ಸೇವೆಯಲ್ಲೀಗ 150ಕ್ಕೂ ಹೆಚ್ಚು ಡ್ರೈವರ್‌ಗಳಿದ್ದಾರೆ. ಪ್ರಾಮಾಣಿಕ ಸೇವೆಯೇ ನಮ್ಮ ಆದ್ಯತೆ. ಗ್ರಾಹಕರಿಗೆ ಯಾವುದೇ ರೀತಿಯ ಅಪಾಯವಾಗದಂತೆ ಅವರ ವಾಹನದಲ್ಲೇ ಮನೆಗೆ ತಲುಪಿಸುವ ಜವಾಬ್ದಾರಿ ನಮ್ಮದು ಎನ್ನುತ್ತಾರೆ ಸಂಸ್ಥೆಯ ಮಾಲಕರು.
ನಾವು ಸಾಕಷ್ಟು ವ್ಯವಸ್ಥೆಗಳನ್ನು ಹೊಂದಿದ ಹೊರತಾಗಿಯೂ ವಾರಾಂತ್ಯದಲ್ಲಿ ತೀವ್ರ ಸಂದಣಿಯಿರುತ್ತದೆ. ಮೊದಲೇ ಗ್ರಾಹಕರು ಬುಕ್ಕಿಂಗ್ ಮಾಡಿರುತ್ತಾರೆ. ನಮ್ಮ ಸೇವೆಯನ್ನು ಶೀಘ್ರದಲ್ಲೇ ದೆಹಲಿಗೆ ವಿಸ್ತರಿಸುವ ಯೋಜನೆಯಿದೆ ಎಂದೂ ರಹೇಜಾ ತಿಳಿಸಿದ್ದಾರೆ.