ಭಾರತದಲ್ಲಿನ ಹಲವು ರೈತರು 'ಲವ್ ಹಾರ್ಮೋನ್' ಆಕ್ಸಿಟಾಸಿನ್ ಅಥವಾ 'ಆಲಿಂಗಿಸುವ ರಾಸಾಯನಿಕ' ಎಂದು ಹೇಳಲಾಗುವ ಹಾರ್ಮೋನನ್ನು ಕುಂಬಳಕಾಯಿ ಮತ್ತು ಸೌತೆಕಾಯಿ ಬೆಳೆ ಸಮೃದ್ಧಿಗಾಗಿ ಬಳಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಆಕ್ಸಿಟಾಸಿನ್‌ನ ಸ್ವಚ್ಛಂದ ಬಳಕೆಯಿಂದಾಗಿ ಆರೋಗ್ಯಕ್ಕೆ ಹಾನಿಯುಂಟಾಗಬಹುದು. ನಿರ್ದಿಷ್ಟ ಅವಧಿಯವರೆಗೆ ತರಕಾರಿ ಬೆಳೆಯಲು ಇದನ್ನು ಬಳಸಿದಲ್ಲಿ ಅಡ್ಡ ಪರಿಣಾಮಗಳೇ ಹೆಚ್ಚು ಎಂದು ಕೇಂದ್ರ ಕೃಷಿ ಇಲಾಖೆಯು ನಿಷೇಧದ ಎಚ್ಚರಿಕೆಯನ್ನೂ ರೈತರಿಗೆ ನೀಡಿದೆ.
ಉತ್ತರ ಭಾರತದ ಪಂಜಾಬ್ ಮತ್ತು ಉತ್ತರ ಪ್ರದೇಶಗಳಲ್ಲಿ ಆಕ್ಸಿಟಾಸಿನ್ ಬಳಕೆಯು ವ್ಯಾಪಕವಾಗಿದ್ದು, ಇದರಿಂದಾಗಿ ಮಾನವನ ಸಾಮಾಜಿಕ ವರ್ತನೆ ಸೇರಿದಂತೆ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳನ್ನು ಬೀರುವ ಸಾಧ್ಯತೆ ದಟ್ಟವಾಗಿರುತ್ತದೆ. ಹುಟ್ಟಿನಲ್ಲಿ ತೊಂದರೆ, ಮೊಲೆ ಹಾಲಿನಲ್ಲಿ ಸಮಸ್ಯೆ ಮುಂತಾದುವು ಕಾಣಿಸಿಕೊಳ್ಳಬಹುದು ಎಂದು ವೈಜ್ಞಾನಿಕ ನಿಯತಕಾಲಿಕವೊಂದು ವರದಿ ಮಾಡಿದೆ.
ಅಚ್ಚರಿಯ ವಿಚಾರವೆಂದರೆ ಇದೀಗ ಅಕ್ರಮವಾಗಿ ಬಳಸಲಾಗುತ್ತಿರುವ ಪ್ರಾಣಿಯ ಹಾರ್ಮೋನು ತೋಟಗಾರಿಕಾ ಬೆಳೆ ವೃದ್ಧಿಯಲ್ಲಿ ಯಾವ ಮಟ್ಟದ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಯಾರಿಗೂ ಸ್ಪಷ್ಟತೆಯಿಲ್ಲ.
ಆಕ್ಸಿಟಾಸಿನ್‌ನಿಂದಾಗಿ ಯಾವುದೇ ಬೆಳೆಯಲ್ಲಿ ವೃದ್ಧಿ ಮತ್ತು ಸುಧಾರಣೆ ಕಾಣುವುದೆಂಬ ವರದಿಗಳ ಬಗ್ಗೆ ಬ್ರಿಟನ್‌ನ ಹಾರ್ಪೆಂಡೆನ್ ರೋಥಾಮಸ್ತೆದ್ ರೀಸರ್ಚ್ ಮತ್ತು ದರ್ಹಾಮ್ ಯುನಿವರ್ಸಿಟಿಯಲ್ಲಿನ ತೋಟಗಾರಿಕಾ ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ.
ಹಾಲಿನ ಉತ್ಪಾದನೆ ಹೆಚ್ಚಿಸುವ ಸಲುವಾಗಿ ಈ ಹಿಂದೆ ಸಾಕು ಪ್ರಾಣಿಗಳ ಮೇಲೆ ಆಕ್ಸಿಟಾಸಿನ್ ಬಳಸಿದ್ದರ ಬಗ್ಗೆ ಭಾರತ ಸರಕಾರವು ಕಠಿಣ ಕ್ರಮ ಕೈಗೊಂಡಿತ್ತು.