2010ರ ಆರ್ಥಿಕ ವರ್ಷದಲ್ಲಿ ಭಾರತದ ಅರ್ಥ ವ್ಯವಸ್ಥೆಯು ಶೇಕಡಾ 6.5ರ ಪ್ರಗತಿ ಕಾಣಬಹುದು ಎಂದಿರುವ ಭಾರತೀಯ ರಿಸರ್ವ್ ಬ್ಯಾಂಕ್, ಅಭಿವೃದ್ಧಿ ದರವು ಗರಿಷ್ಠ ಮಟ್ಟಕ್ಕೆ ಮರಳಲು ಆರ್ಥಿಕ ಕ್ರೋಢೀಕರಣದ ಅಗತ್ಯವಿದೆ ಎಂಬುದನ್ನು ಒತ್ತಿ ಹೇಳಿದೆ.
ದಿನಬಳಕೆಯ ವಸ್ತುಗಳ ಬೆಲೆಯೇರಿಕೆ, ಸುಲಭ ಆರ್ಥಿಕ ನಿಯಮಾವಳಿ ಮತ್ತು ವಿಸ್ತರಣಾತ್ಮಕ ಆರ್ಥಿಕ ನಿಯಮಾವಳಿಗಳ ಕಾರಣದಿಂದಾಗಿ ವರ್ಷಾಂತ್ಯದೊಳಗೆ ಹಣದುಬ್ಬರ ದರವು ಮೇಲಕ್ಕೇರುವ ಮುನ್ಸೂಚನೆಗಳಿವೆ ಎಂದೂ ಆರ್‌ಬಿಐ ತಿಳಿಸಿದೆ.
ಆಹಾರ ಹಣದುಬ್ಬರ ದರವು ಗರಿಷ್ಠ ಮಟ್ಟದಲ್ಲೇ ಇದ್ದು, ಆಗಾಗ ಮಳೆ ಬರುತ್ತಿದ್ದರೆ ಇನ್ನಷ್ಟು ಬೆಳವಣಿಗೆಯ ಸಾಮರ್ಥ್ಯ ಹೊಂದಲಿದೆ ಮತ್ತು ಬಳಕೆದಾರರ ಸೂಚ್ಯಂಕ ದರವೂ ವೃದ್ಧಿಯ ಮಟ್ಟದಲ್ಲೇ ಮುಂದುವರಿದಿದೆ ಎಂದು ಅರ್ಥವ್ಯವಸ್ಥೆಯ ತ್ರೈಮಾಸಿಕ ವಿಶ್ಲೇಷಣೆಯಲ್ಲಿ ಕೇಂದ್ರೀಯ ಬ್ಯಾಂಕ್ ವಿವರಿಸಿದೆ.
ಆರ್ಥಿಕ ನೀತಿಯ ಪರಾಮರ್ಶೆಯ ಒಂದು ದಿನದ ಮೊದಲು ಜೂನ್ ತಿಂಗಳಿಗೆ ಅಂತ್ಯಗೊಂಡ ತ್ರೈಮಾಸಿಕ ವಿಶ್ಲೇಷಣೆ ನಡೆಸಿರುವ ಆರ್‌ಬಿಐ, ಅಭಿವೃದ್ಧಿಯು ಗರಿಷ್ಠ ಮಟ್ಟದಲ್ಲಿ ಸಾಗಬೇಕಾದರೆ ಆರ್ಥಿಕ ಕ್ರೋಢೀಕರಣದ ಅನಿವಾರ್ಯತೆಯಿದೆ ಎಂದಿದೆ.
ಏಪ್ರಿಲ್ ತಿಂಗಳಲ್ಲಿದ್ದ ಶೇ.5.7ರ ಆರ್ಥಿಕ ಪ್ರಗತಿಯಲ್ಲಿ ಇದೀಗ ಸಾಕಷ್ಟು ಸುಧಾರಣೆಯಾಗಿರುವುದನ್ನೂ ಬೊಟ್ಟು ಮಾಡಿರುವ ಬ್ಯಾಂಕ್, ಸಗಟು ಸೂಚ್ಯಂಕ ದರವನ್ನಾಧರಿಸಿದ ಹಣದುಬ್ಬರ ದರವು ಜುಲೈ 11ಕ್ಕೆ ಕೊನೆಗೊಂಡ ವಾರದಲ್ಲಿ ಆಂಶಿಕ ಏರಿಕೆ ದಾಖಲಿಸಿದ್ದು, ಶೇ.(-)1.2ನ್ನು ತಲುಪಿದೆ. ಇದಕ್ಕೆ ಕಾರಣವಾಗಿರುವುದು ದಿನ ಬಳಕೆಯ ವಸ್ತುಗಳಲ್ಲಿ ಹೆಚ್ಚಳವಾಗಿರುವುದು ಎಂದು ಹೇಳಿದೆ.