ಉತ್ತರ ಪ್ರದೇಶ ರಾಜಕಾರಣದಲ್ಲಿ ಮುಖ್ಯಮಂತ್ರಿ ಮಾಯಾವತಿಯವರು ನಡೆಸುತ್ತಿರುವ ಅಧಿಕಾರ ಯಾವ ರೀತಿಯದ್ದು ಎಂಬುದು ಎಲ್ಲರಿಗೂ ಗೊತ್ತು. ಇದೀಗ ಕ್ಷಾಮದ ಹೆಸರಿನಲ್ಲೂ ಅದೇ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ಪ್ರಕಾರ ಬರಪೀಡಿತ ಜಿಲ್ಲೆಗಳೆಂದು ಘೋಷಿಸುವಾಗ ಪಕ್ಷಪಾತ ನಡೆಸಲಾಗಿದೆ.
ಬಹುಜನ ಸಮಾಜವಾದಿ ಪಕ್ಷವನ್ನು ಹೊರತುಪಡಿಸಿದ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗಿಲ್ಲ. ಅಲ್ಲಿ ಬರ ಸ್ಥಿತಿಯಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಇದು ಸೇಡಿನ ರಾಜಕಾರಣ ಎಂಬುದು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ಆರೋಪ.
ಈ ಸಂಬಂಧ ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥೆ ರೀಟಾ ಬಹುಗುಣ ಜೋಶಿಯವರು ಪ್ರಧಾನಿ ಮನಮೋಹನ್ ಸಿಂಗ್‌ರನ್ನು ಭೇಟಿ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಾ, "ಮಾಯಾವತಿಯವರು ಬರಪೀಡಿತ ಪ್ರದೇಶಗಳೆಂದು ಘೋಷಿಸುವ ಸಂದರ್ಭದಲ್ಲಿ ಪಕ್ಷಪಾತ ನೀತಿಯನ್ನು ಅನುಸರಿಸಿದ್ದಾರೆ. ಬರಪೀಡಿತವಾಗಿದ್ದರೂ ಕಾಂಗ್ರೆಸ್ ಸಂಸದರು ಪ್ರತಿನಿಧಿಸುವ ಪ್ರದೇಶಗಳನ್ನು ನಿರ್ಲಕ್ಷಿಸಲಾಗಿದೆ. ಇದು ಜನತೆಗೆ ಮಾಡಿದ ಅನ್ಯಾಯ. ಬರಪೀಡಿತ ಪ್ರದೇಶಗಳನ್ನು ಆರಿಸುವಾಗ ಯಾವುದೇ ಭೇದ ಸಲ್ಲದು" ಎಂದಿದ್ದಾರೆ.
ಉತ್ತರ ಪ್ರದೇಶದ 71 ಜಿಲ್ಲೆಗಳಲ್ಲಿ 47 ಜಿಲ್ಲೆಗಳನ್ನು ಮಾಯಾವತಿ ಬರಪೀಡಿತ ಎಂದು ಘೋಷಿಸಿದ್ದು, ಅದಕ್ಕಾಗಿ ಕೇಂದ್ರ ಸರಕಾರದಿಂದ 80,000 ಕೋಟಿ ರೂಪಾಯಿಗಳ ಪ್ಯಾಕೇಜ್ ನೀಡುವಂತೆ ಕೇಳಿಕೊಂಡಿದ್ದಾರೆ.
ಮಾಯಾವತಿ ಒಮ್ಮಿಂದೊಮ್ಮೆಲೇ ಇಷ್ಟು ದೊಡ್ಡ ಮೊತ್ತದ ಪ್ಯಾಕೇಜ್ ಕೇಳಿರುವ ವಿಚಾರ ಲೋಕಸಭೆಯಲ್ಲೂ ಪ್ರತಿಧ್ವನಿಸಿತು. ಇಂತಹ ಪರಿಸ್ಥಿತಿಯಿದ್ದರೂ ಕೇಂದ್ರಕ್ಕೆ ಮಾಹಿತಿ ನೀಡದ ರಾಜ್ಯಗಳ ಅಸಡ್ಡೆಯನ್ನು ಕಾಂಗ್ರೆಸ್ ಸಂಸದ ಜಗದಾಂಬಿಕಾ ಪಾಲ್ ತರಾಟೆಗೆ ತೆಗೆದುಕೊಂಡರು. ಅಲ್ಲಿ 60 ಜಿಲ್ಲೆಗಳು ಬರಪೀಡಿತವಾಗಿದ್ದರೂ ಹಲವು ಜಿಲ್ಲೆಗಳನ್ನು ನಿರ್ಲಕ್ಷಿಸಲಾಗಿದೆ. ಈ ಸಂಬಂಧ ಯಾವುದೇ ಮಾಹಿತಿಯನ್ನು ಕೇಂದ್ರಕ್ಕೆ ನೀಡಲಾಗಿಲ್ಲ ಎಂಬ ವಿಚಾರವನ್ನೂ ಪ್ರಸ್ತಾಪಿಸಿದರು.