ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ಪ್ರಕಟಿಸಿರುವ ತನ್ನ ತ್ರೈಮಾಸಿಕ ಸಾಲ ನೀತಿಯಲ್ಲಿ ಪ್ರಮುಖ ಹಣಕಾಸು ನೀತಿಯ ದರಗಳನ್ನು ಹಾಗೆಯೇ ಉಳಿಸಿಕೊಂಡಿದ್ದು, 2009-10ರ ಆರ್ಥಿಕ ವರ್ಷದಲ್ಲಿ ಶೇ.6ರ ಪ್ರಗತಿ ದರ ದಾಖಲಿಸುವ ಭರವಸೆ ವ್ಯಕ್ತಪಡಿಸಿದೆ.
ನಗದು ಮೀಸಲು ಅನುಪಾತ (ಸಿಆರ್‌ಆರ್-ಶೇ.5), ರೆಪೋ ದರ ಮತ್ತು ರಿವರ್ಸ್ ರೆಪೋ ದರಗಳು ಕೂಡ ಮುಂದಿನ ಮೂರು ತಿಂಗಳುಗಳ ಅವಧಿಯಲ್ಲಿ ಯಾವುದೇ ಬದಲಾವಣೆ ಕಾಣದೆ, ಈಗಿರುವ ಹಂತಗಳಲ್ಲೇ ಮುಂದುವರಿಯಲಿದೆ ಎಂದು ಬ್ಯಾಂಕ್ ತಿಳಿಸಿದೆ.
ಕಳೆದ ಒಂಬತ್ತು ವರ್ಷಗಳ ಕನಿಷ್ಠ ಸಾಲ ದರ ಶೇ.4.75ರಲ್ಲಿ ಬ್ಯಾಂಕ್ ಯಾವುದೇ ಬದಲಾವಣೆ ಮಾಡಿಲ್ಲ. ರಿವರ್ಸ್ ರೆಪೋ ದರವನ್ನು ಕೂಡ ಶೇ.3.25ರಲ್ಲೇ ಉಳಿಸಿಕೊಂಡಿದೆ.
ಸಾಲ ನೀತಿಯಲ್ಲಿ ಬದಲಾವಣೆಗಳಾಗಬಹುದು ಎಂಬ ವಿಶ್ಲೇಷಕರ ನಿರೀಕ್ಷೆಯನ್ನು ಗವರ್ನರ್ ಡಿ. ಸುಬ್ಬಾರಾವ್ ಹುಸಿಗೊಳಿಸಿದ್ದು, ಹಣಕಾಸು ನೀತಿಯ ದರಗಳನ್ನು ಬದಲಾಯಿಸಿಲ್ಲ.
2009-10ರ ಸಾಲಿನ ಹಣಕಾಸು ವರ್ಷದಲ್ಲಿ ಶೇ.6ರ ಪ್ರಗತಿ ದರ ಸಾಧಿಸುವ ಗುರಿಯನ್ನೂ ರಿಸರ್ವ್ ಬ್ಯಾಂಕ್ ಇಟ್ಟುಕೊಂಡಿದೆ.
ಜತೆಗೆ ಹಣದುಬ್ಬರ ದರವು ಮಾರ್ಚ್ 2010ರ ವೇಳೆಗೆ ಶೇ.5ರಷ್ಟಿರಬಹುದು ಎಂದು ಕೇಂದ್ರೀಯ ಬ್ಯಾಂಕ್ ಎಚ್ಚರಿಸಿದೆ. ಈ ಹಿಂದೆ ಶೇ.4ರಷ್ಟಿರಬಹುದು ಎಂದು ಅಂದಾಜಿಸಲಾಗಿತ್ತು.