2007ರಿಂದ 2009ರವರೆಗೆ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವು 451.88 ಮಿಲಿಯನ್ ಡಾಲರ್ (ಸುಮಾರು 2,170 ಕೋಟಿ ರೂ.) ಮೊತ್ತಕ್ಕೆ 21 ವಿಮಾನಗಳನ್ನು ಮಾರಾಟ ಮಾಡಿದೆ ಎಂದು ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಮಂಗಳವಾರ ತಿಳಿಸಿದ್ದಾರೆ.
17 ವಿಮಾನಗಳನ್ನು ಮಾರಾಟ ಮತ್ತು ಮರಳಿ ಲೀಸ್ ಆಧಾರದ ಮೇಲೆ ಮತ್ತು ಉಳಿದ ನಾಲ್ಕು ವಿಮಾನಗಳನ್ನು ಯಥಾಸ್ಥಿತಿ ಆಧಾರದ ಮೇಲೆ ಮಾರಾಟ ಮಾಡಲಾಗಿದೆ ಎಂದು ರಾಜ್ಯ ಸಭೆಗೆ ಪಟೇಲ್ ಲಿಖಿತ ಉತ್ತರ ನೀಡಿದ್ದಾರೆ.
ರಾಷ್ಟ್ರೀಯ ವಿಮಾನಯಾನ ಸಂಸ್ಥೆಯು ಜಗತ್ತಿನಾದ್ಯಂತದ ಹಲವು ಕಂಪನಿಗಳಿಂದ 46 ವಿವಿಧ ಬಗೆಯ ವಿಮಾನಗಳನ್ನು ಗುತ್ತಿಗೆಗೆ ಪಡೆದಿದ್ದು, 18.945 ಮಿಲಿಯನ್ ಡಾಲರ್‌ಗಳಂತೆ ತಿಂಗಳ ಬಾಡಿಗೆಯನ್ನು ಕೊಟ್ಟಿದೆ ಎಂದರು.
ಏರ್ ಇಂಡಿಯಾ ಗುತ್ತಿಗೆ ಆಧಾರದಲ್ಲಿ ಪಡೆದಿರುವ ವಿಮಾನಗಳಲ್ಲಿ ವಿವಿಧ ಬೋಯಿಂಗ್ ಮತ್ತು ಏರ್‌ಬಸ್ ವಿಮಾನಗಳು ಸೇರಿವೆ.
"ಬೆಲೆ ತಗ್ಗುವ ಮತ್ತು ಬಳಕೆ ಕಡಿಮೆಯಾಗುವ ಮೊದಲು ಏರ್ ಇಂಡಿಯಾವು ಪ್ರತಿ ತಿಂಗಳೂ ಸರಾಸರಿ 1,500 ಕೋಟಿ ರೂಪಾಯಿಗಳ ಅಂದಾಜು ಮಾಸಿಕ ವೆಚ್ಚ ಮಾಡುತ್ತಿತ್ತು" ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತಾ ಸಚಿವರು ತಿಳಿಸಿದ್ದಾರೆ.
ಮಾರ್ಗಗಳನ್ನು ಹತೋಟಿಯಲ್ಲಿಡುವುದು, ಗುತ್ತಿಗೆ ವಿಮಾನಗಳನ್ನು ವಾಪಸ್ ಮಾಡುವುದು, ಒಪ್ಪಂದದ ಉದ್ಯೋಗಿಗಳು ಮತ್ತು ವಿದೇಶಿ ಕಚೇರಿಗಳ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತಗೊಳಿಸುವುದು ಹಾಗೂ ಮಿತಿ ಮೀರಿದ ಖರ್ಚುಗಳನ್ನು ಕಡಿಮೆ ಮಾಡುವ ಸಲುವಾಗಿ ಅಂತಾರಾಷ್ಟ್ರೀಯ ಸಲಹಾ ಸಮಿತಿಗಳನ್ನು ರಚಿಸುವುದು ಮುಂತಾದ ಕ್ರಮಗಳನ್ನು ಏರ್ ಇಂಡಿಯಾ ತೆಗೆದುಕೊಂಡಿತ್ತು ಎಂದು ಪಟೇಲ್ ವಿವರಿಸಿದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತಾ ಅವರು, 2008ರಲ್ಲಿ ವಿಮಾನಗಳಿಗೆ ಹಕ್ಕಿ ಬಡಿದ 304 ಪ್ರಕರಣಗಳು ವರದಿಯಾಗಿವೆ ಎಂದರು.