ಬ್ರಿಟನ್ ಕೌನ್ಸಿಲ್‌ನಿಂದ ಭಾರತಕ್ಕೆ ಹೊರಗುತ್ತಿಗೆ ಉದ್ಯೋಗ
ಲಂಡನ್, ಬುಧವಾರ, 29 ಜುಲೈ 2009( 11:17 IST )
ತೆರಿಗೆ ಹಣ ಉಳಿಸುವ ಮೂಲಕ ವೆಚ್ಚ ಕಡಿತ ಮಾಡುವ ಉದ್ದೇಶವನ್ನಿರಿಸಿಕೊಂಡಿರುವ ಬ್ರಿಟೀಷ್ ಕೌನ್ಸಿಲ್, 100ಕ್ಕೂ ಹೆಚ್ಚು ಆರ್ಥಿಕ ಮತ್ತು ಮಾಹಿತಿ ತಂತ್ರಜ್ಞಾನ ಉದ್ಯೋಗಗಳನ್ನು ಭಾರತಕ್ಕೆ ಹೊರಗುತ್ತಿಗೆ ನೀಡಲಿದೆ ಎಂದು 'ದಿ ಟೈಮ್ಸ್' ವರದಿ ಮಾಡಿದೆ.
ಪ್ರಸಕ್ತ ಕೌನ್ಸಿಲ್ ಹೊಂದಿರುವ 1,300 ಬ್ರಿಟೀಷ್ ಉದ್ಯೋಗಿಗಳಲ್ಲಿ 500 ಮಂದಿಯನ್ನು ಮುಂದಿನ 18 ತಿಂಗಳಲ್ಲಿ ಮನೆಗೆ ಕಳುಹಿಸಲಾಗುತ್ತದೆ. ಆ ಮೂಲಕ 45 ಮಿಲಿಯನ್ ಪೌಂಡ್‌ಗಳನ್ನು (74.44 ಮಿಲಿಯನ್ ಅಮೆರಿಕನ್ ಡಾಲರ್) ಉಳಿಸುವ ಯೋಚನೆ ಕೌನ್ಸಿಲ್‌ನದ್ದು. ಒಟ್ಟು ಉದ್ಯೋಗದ ಐದನೇ ಒಂದು ಭಾಗಕ್ಕೆ ಭಾರತವನ್ನು ಆಶ್ರಯಿಸುವ ಯೋಚನೆಯಿದೆ ಎಂದು ಹೇಳಲಾಗಿದೆ.
ಈ ವರದಿಗೆ ಪತ್ರಿಕೆಯು ಯಾವುದೇ ಮೂಲವನ್ನು ತಿಳಿಸಿಲ್ಲ.
ಅಲ್ಲದೆ ಕೌನ್ಸಿಲ್ ಹೊಂದಿರುವ 500 ಶಾಶ್ವತ ಕಚೇರಿ ಸಹಾಯಕರ ಹುದ್ದೆಯನ್ನು 280ಕ್ಕೆ ಇಳಿಸಲಿದೆ. ಅವುಗಳನ್ನು ಭರ್ತಿ ಮಾಡಲು ಏಜೆನ್ಸಿಗಳು, ಅರೆಕಾಲಿಕ ಉದ್ಯೋಗ ಅಥವಾ ಕಾಂಟ್ರಾಕ್ಟ್ ಉದ್ಯೋಗಿಗಳ ಮೊರೆ ಹೋಗಲಾಗುತ್ತದೆ ಎಂದೂ ವರದಿ ವಿವರಿಸಿದೆ.
ಕೌನ್ಸಿಲ್‌ಗೆ ಹಣಕಾಸು ಸಹಾಯ ಮಾಡುವ ಬ್ರಿಟನ್‌ನ ವಿದೇಶಾಂಗ ಮತ್ತು ಕಾಮನ್‌ವೆಲ್ತ್ ಕಚೇರಿಯು ಇಂತಹ ಹಲವು ಆಯ್ಕೆಗಳನ್ನು ನೀಡಿತ್ತು ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಲು ತಕ್ಷಣಕ್ಕೆ ಬ್ರಿಟೀಷ್ ಕೌನ್ಸಿಲ್ ವಕ್ತಾರರು ಲಭ್ಯರಾಗಿಲ್ಲ ಎಂದೂ ವರದಿ ತಿಳಿಸಿದೆ.