ಸಂತೋಷ ಮತ್ತು ಪರಿಸರ ಸ್ನೇಹಿ ಬದುಕು ಸಾಗಿಸುವ ವಿಚಾರದಲ್ಲಿ ಅಮೆರಿಕಾ ಮತ್ತು ಬ್ರಿಟನ್ ಮುಂತಾದ ಅಭಿವೃದ್ಧಿ ಹೊಂದಿದ ದೇಶಗಳನ್ನೂ ಮೀರಿಸಿರುವ ಭಾರತವು 143 ರಾಷ್ಟ್ರಗಳ ಪೈಕಿ 35ನೇ ಸ್ಥಾನವನ್ನು ಪಡೆದುಕೊಂಡಿದೆ.
ಬ್ರಿಟೀಷ್ ಮೂಲದ ನ್ಯೂ ಇಕಾನಮಿಕ್ ಫೌಂಡೇಶನ್ ಎಂಬ ಸಂಘಟನೆಯು ನಡೆಸಿದ 'ಹ್ಯಾಪಿ ಪ್ಲಾನೆಟ್ ಇಂಡೆಕ್ಸ್' (ಎಚ್‌ಪಿಐ) ಸಮೀಕ್ಷೆಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿರುವ ರಾಷ್ಟ್ರ ಕೋಸ್ಟರಿಕಾ.
ಆಯುಷ್ಯ, ಜೀವನದ ಗರಿಷ್ಠ ತೃಪ್ತಿಗಳು ಮತ್ತು ಪರಿಸರಾತ್ಮಕ ಹೆಜ್ಜೆ ಗುರುತುಗಳ ವೈಯಕ್ತಿಕ ಅಭಿಪ್ರಾಯಗಳನ್ನು ಆಧರಿಸಿ ಈ ಪಟ್ಟಿಯನ್ನು ತಯಾರಿಸಲಾಗಿದೆ.
ಭಾರತವು 2006ರಲ್ಲಿನ ಸಮೀಕ್ಷೆಯಲ್ಲಿ 90ನೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ 55 ಸ್ಥಾನಗಳ ಏರಿಕೆ ಕಂಡು 35ನೇ ಸ್ಥಾನವನ್ನು ತಲುಪಿದೆ.
ಈ ಪಟ್ಟಿಯಲ್ಲಿನ ಮತ್ತೊಂದು ಆಶ್ಚರ್ಯಕರ ಅಂಶವೆಂದರೆ ಭಾರತಕ್ಕಿಂತ ಪಾಕಿಸ್ತಾನವು ಉತ್ತಮ ಎನ್ನುವುದು. 143 ದೇಶಗಳನ್ನೊಳಗೊಂಡಿರುವ ಈ ಪಟ್ಟಿಯಲ್ಲಿ ಪಾಕಿಸ್ತಾನ 24ನೇ ಸ್ಥಾನ ಪಡೆದುಕೊಂಡು ಭಾರತಕ್ಕಿಂತಲೂ 11 ಸ್ಥಾನಗಳ ವ್ಯತ್ಯಾಸವನ್ನು ಕಾಯ್ದುಕೊಂಡಿದೆ. ಕಳೆದ ಬಾರಿ ಪಾಕಿಸ್ತಾನ ಭಾರತಕ್ಕಿಂತಲೂ ಹಿಂದೆ ಅಂದರೆ 112ನೇ ಸ್ಥಾನದಲ್ಲಿತ್ತು.
ಐಷಾರಾಮಿ ಎನ್ನಲಾಗುತ್ತಿರುವ ಅಮೆರಿಕಾ ಈ ಪಟ್ಟಿಯಲ್ಲಿ ಪಡೆದುಕೊಂಡಿರುವ ಸ್ಥಾನ 114. ಬ್ರಿಟನ್‌ನದ್ದು 74. ಎರಡೂ ದೇಶಗಳು ಈ ಬಾರಿ ಸುಧಾರಣೆ ಕಂಡಿರುವುದು ವಿಶೇಷ. ಕಳೆದ ಬಾರಿ ಅಮೆರಿಕಾ 150 ಹಾಗೂ ಬ್ರಿಟನ್ 108ನೇ ಸ್ಥಾನದಲ್ಲಿದ್ದವು.
2006ರಲ್ಲಿ 31ನೇ ಸ್ಥಾನದಲ್ಲಿದ್ದ ಚೀನಾ ಈ ಬಾರಿ 20 ಹಾಗೂ 41ನೇ ಸ್ಥಾನದಲ್ಲಿದ್ದ ಬಾಂಗ್ಲಾದೇಶ 31ನೇ ಸ್ಥಾನ ಪಡೆದುಕೊಂಡಿವೆ. ಆದರೆ 15ನೇ ಸ್ಥಾನದಲ್ಲಿದ್ದ ಶ್ರೀಲಂಕಾ 22ನೇ ಸ್ಥಾನಕ್ಕೆ ಕುಸಿದಿದೆ.