ಭಾರತದಲ್ಲಿನ ನಿಯಮಗಳನ್ನು ಏರ್‌ಲೈನ್ಸ್‌ಗಳು ಪಾಲಿಸಲೇಬೇಕು: ಸರಕಾರ
ನವದೆಹಲಿ, ಬುಧವಾರ, 29 ಜುಲೈ 2009( 17:18 IST )
ವಿಮಾನಯಾನ ಸಂಸ್ಥೆಗಳು ಭಾರತದಲ್ಲಿ ಪ್ರಯಾಣಿಕರನ್ನು ತಪಾಸಣೆ ನಡೆಸುವಾಗ ಕಡ್ಡಾಯವಾಗಿ ಈ ನೆಲದ ಕಾನೂನನ್ನು ಅನುಸರಿಸಬೇಕು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.
ಅಮೆರಿಕಾ ಮೂಲದ ಕಾಂಟಿನೆಂಟಲ್ ಏರ್‌ಲೈನ್ಸ್‌ನಿಂದ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಪಟ್ಟ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ವಿವಾದವನ್ನು ಉಲ್ಲೇಖಿಸುತ್ತಾ ಸಚಿವರು, ನಾಗರಿಕ ವಿಮಾನ ಸುರಕ್ಷತಾ ಕಾರ್ಯಾಲಯದ (ಬಿಸಿಎಎಸ್) ನಿಯಮಾವಳಿಗಳನ್ನು ಎಲ್ಲಾ ವಿಮಾನಯಾನ ಸಂಸ್ಥೆಗಳು ಭಾರತದಲ್ಲಿ ಕಡ್ಡಾಯವಾಗಿ ಅನುಸರಿಸತಕ್ಕದ್ದು ಎಂದರು.
ಏಪ್ರಿಲ್ ತಿಂಗಳಿನ ಅಮೆರಿಕಾ ಭೇಟಿ ಸಂದರ್ಭದಲ್ಲಿ ಕಾಂಟಿನೆಂಟಲ್ ಏರ್‌ಲೈನ್ಸ್ ಶಿಷ್ಟಾಚಾರ ಉಲ್ಲಂಘಿಸಿ ಕಲಾಂರನ್ನು ತೀವ್ರ ತಪಾಸಣೆಗೊಳಪಡಿಸಿತ್ತು.
ಕಾಂಟಿನೆಂಟಲ್ ವಿಮಾನಯಾನ ಸಂಸ್ಥೆಯು ಪ್ರಕರಣದ ಬಗ್ಗೆ ಈಗಾಗಲೇ ಕ್ಷಮೆ ಯಾಚಿಸಿರುವುದರಿಂದ ಅಮೆರಿಕಾ ಸರಕಾರದ ಜತೆ ಯಾವುದೇ ವಿಚಾರ ಪ್ರಸ್ತಾಪಿಸಿಲ್ಲ. ಹಾಗೊಂದು ವೇಳೆ ಸಮಸ್ಯೆಗಳಿರುವುದು ಕಂಡು ಬಂದಲ್ಲಿ ಅಮೆರಿಕಾದ ಗಮನಕ್ಕೆ ತರಲಾಗುತ್ತದೆ ಎಂದು ಕಾರ್ಯಕ್ರಮವೊಂದರ ನಂತರ ಪತ್ರಕರ್ತರ ಪ್ರಶ್ನೆಗಳಿಗುತ್ತರಿಸುತ್ತಾ ಪಟೇಲ್ ತಿಳಿಸಿದ್ದಾರೆ.
ಆರ್ಥಿಕ ಮುಗ್ಗಟ್ಟಿನಲ್ಲಿರುವ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವು ಸರಕಾರದ ಬಳಿ 20,000 ಕೋಟಿ ರೂಪಾಯಿಗಳ ಬಂಡವಾಳ ನೀಡುವಂತೆ ಕೇಳಿಕೊಂಡಿದ್ದರ ಬಗ್ಗೆ ಪ್ರಶ್ನಿಸಿದಾಗ ಅವರು, 'ಇದು ಕೇವಲ ವದಂತಿ' ಎಂದರು.
ಸರಕಾರದಿಂದ ತಕ್ಷಣಕ್ಕೆ ಏರ್ ಇಂಡಿಯಾವು 10 ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ಬಯಸುತ್ತಿದ್ದು, ನಂತರ ಮುಂದಿನ ನಾಲ್ಕೈದು ವರ್ಷಗಳವರೆಗೆ ಪ್ರತಿ ವರ್ಷ 2,500-3,000 ಕೋಟಿ ರೂಪಾಯಿಗಳ ಬಂಡವಾಳವನ್ನು ಕೇಳಿತ್ತು ಎಂಬ ವರದಿಗಳಿದ್ದವು.