15 ಸಾವಿರಕ್ಕಿಂತ ಕೆಳಗಿಳಿದ ಚಿನ್ನ ಬೆಲೆ; ಬೆಳ್ಳಿ ದರವೂ ಕುಸಿತ
ನವದೆಹಲಿ, ಬುಧವಾರ, 29 ಜುಲೈ 2009( 18:13 IST )
ವಿದೇಶಿ ಮಾರುಕಟ್ಟೆಗಳಲ್ಲಿ ಚಿನ್ನ ಬೆಲೆ ಕುಸಿದದ್ದನ್ನು ಮನಗಂಡ ದಾಸ್ತಾನುದಾರರು ಮಾರಾಟಕ್ಕೆ ಮುಗಿ ಬಿದ್ದ ಕಾರಣ ಚಿನಿವಾರ ಪೇಟೆಯು ಮುಗ್ಗರಿಸಿದ್ದು, ಪ್ರತೀ 10 ಗ್ರಾಂ ಚಿನ್ನದ ಬೆಲೆಯಲ್ಲಿ 190 ರೂಪಾಯಿಗಳ ಕುಸಿತ ಕಂಡಿದೆ.
ವಿದೇಶೀ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತೀ ಔನ್ಸ್‌ಗೆ 1.42 ಡಾಲರುಗಳ ಕುಸಿತ ಕಂಡು 936.08 ಡಾಲರುಗಳನ್ನು ತಲುಪಿದೆ. ಆರಂಭಿಕ ವ್ಯವಹಾರದಲ್ಲಿ 933.28 ಡಾಲರುಗಳಿಗೆ ಕುಸಿಯುವ ಮೂಲಕ ಜುಲೈ 17ರ ಸ್ಥಿತಿಗೆ ಹೆಜ್ಜೆ ಹಾಕಿತ್ತು.
ಕಳೆದೆರಡು ವ್ಯವಹಾರದ ಅವಧಿಗಳಲ್ಲಿ ಧನಾತ್ಮಕ ವಲಯದಲ್ಲೇ ಉಳಿದುಕೊಂಡಿದ್ದ ಉತ್ಕೃಷ್ಟ ಚಿನ್ನ ಮತ್ತು ಆಭರಣ ಚಿನ್ನಗಳಲ್ಲಿ ಪ್ರತೀ 10 ಗ್ರಾಂಗೆ 190 ರೂಪಾಯಿಗಳ ಕುಸಿತ ಕಂಡಿದ್ದು, ಕ್ರಮವಾಗಿ 14,990 ಹಾಗೂ 14,840 ರೂಪಾಯಿಗಳನ್ನು ತಲುಪಿದೆ.
ಪವನ್ ಚಿನ್ನದ ಬೆಲೆಯಲ್ಲಿ 25 ರೂಪಾಯಿಗಳ ಹಿನ್ನಡೆ ಕಂಡು ಬಂದಿದೆ. ಎಂಟು ಗ್ರಾಂ ಚಿನ್ನದ ಬೆಲೆಯೀಗ 12,475 ರೂಪಾಯಿಗಳು.
ಇದೇ ರೀತಿಯ ದುರ್ಬಲ ಗತಿ ಬೆಳ್ಳಿ ವ್ಯವಹಾರದಲ್ಲೂ ಕಂಡು ಬಂತು. ನಾಣ್ಯ ತಯಾರಕರು ಮತ್ತು ಕೈಗಾರಿಕಾ ಘಟಕಗಳಿಂದ ನಿಯಂತ್ರಿತ ಖರೀದಿಯಿದ್ದರೂ ಸಹ ದಾಸ್ತಾನುದಾರರು ಮಾರಾಟಕ್ಕೆ ಹೆಚ್ಚಿನ ಉತ್ಸಾಹ ತೋರಿಸಿದ ಕಾರಣ ಬೆಳ್ಳಿ ದರ ಕುಸಿಯಿತು.
ಸಿದ್ಧ ಬೆಳ್ಳಿ ಪ್ರತೀ ಕಿಲೋವೊಂದರಲ್ಲಿ 400 ರೂಪಾಯಿಗಳ ಕುಸಿತ ಕಂಡು 22,400 ರೂಪಾಯಿಗಳನ್ನು ತಲುಪಿದ್ದರೆ, ವಾರವನ್ನಾಧರಿಸಿದ ವಿತರಣೆಯಲ್ಲಿ 540 ರೂಪಾಯಿಗಳ ಹಿಂಜರಿತ ಕಂಡು 22,220 ರೂಪಾಯಿಗಳನ್ನು ಮುಟ್ಟಿದೆ.
ನಾಣ್ಯಗಳ ವಿಭಾಗದಲ್ಲೂ ಇದೇ ಗತಿ ಕಂಡು ಬಂದಿದೆ. ಇಲ್ಲಿ ಪ್ರತೀ 100 ನಾಣ್ಯಗಳ ಬೆಲೆಯಲ್ಲಿ 200 ರೂಪಾಯಿಗಳ ಕುಸಿತ ದಾಖಲಾಗಿದ್ದು, ಖರೀದಿ 29,300 ರೂಪಾಯಿ ಹಾಗೂ ಮಾರಾಟ 29,400 ರೂಪಾಯಿಗಳನ್ನು ನಮೂದಿಸಿದೆ.