ನೀವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಆನ್‌ಲೈನ್ ಶಾಪಿಂಗ್ ಮಾಡುವ ಹವ್ಯಾಸ ಬೆಳೆಸಿಕೊಂಡವರಾಗಿದ್ದರೆ ನಿಮ್ಮಲ್ಲಿ ವೈಯಕ್ತಿಕ ಗುರುತು ಸಂಖ್ಯೆ (ಪಿನ್) ಇದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಿ. ಇಲ್ಲದಿದ್ದರೆ ನಿಮಗೆ ಆಗಸ್ಟ್ 1ರ ನಂತರ ಇಂಟರ್ನೆಟ್ ಶಾಪಿಂಗ್ ಮಾಡಲು ಸಾಧ್ಯವಿಲ್ಲ.
ಎಲ್ಲಾ ಕಾರ್ಡು ಬಳಕೆದಾರರಿಗೆ ಹೆಚ್ಚುವರಿ ಗುಪ್ತಸಂಖ್ಯೆಗಳನ್ನು ನೀಡುವ ಮೂಲಕ ಆನ್‌ಲೈನ್ ವ್ಯವಹಾರದಲ್ಲಿ ಸುರಕ್ಷತೆ ಕಾಪಾಡಿಕೊಳ್ಳುವ ಕ್ರಮವನ್ನು ಅನುಸರಿಸಬೇಕು ಎಂದು ಇತ್ತೀಚೆಗಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಒದಗಿಸುವ ಬ್ಯಾಂಕುಗಳಿಗೆ ಆದೇಶ ನೀಡಿದೆ.
ಅದರ ಪ್ರಕಾರ ನಿಮ್ಮ ಹೆಸರು, ಕಾರ್ಡ್ ನಂಬರ್, ಅವಧಿ ಮುಕ್ತಾಯದ ದಿನಾಂಕ, ಕಾರ್ಡ್ ವೇರಿಫಿಕೇಷನ್ ವಾಲ್ಯೂ ನಂಬರ್ ಜತೆ ಈಗ ನಿಮ್ಮ ಕಾರ್ಡ್‌ನಲ್ಲಿರುವ ವೈಯಕ್ತಿಕ ಮಾಹಿತಿಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಲಿದೆ.
ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಕೆದಾರರು ಹೊಸ ಗುಪ್ತ ಸಂಕೇತವನ್ನು ಸಂಬಂಧಪಟ್ಟ ಬ್ಯಾಂಕುಗಳಿಂದ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಪಡೆದುಕೊಳ್ಳಬಹುದು. ಅದಕ್ಕಾಗಿ ಕಾರ್ಡ್ ವಿವರ ಮತ್ತು ವೈಯಕ್ತಿಕ ವಿವರಗಳನ್ನು ದಾಖಲಿಸಬೇಕು. ನಂತರ ಬ್ಯಾಂಕುಗಳು ಪಾಸ್‌ವರ್ಡ್ ಅಥವಾ ಪಿನ್ ನಂಬರನ್ನು ಕಾರ್ಡುದಾರರಿಗೆ ಒದಗಿಸುತ್ತವೆ. ಈ ಗುಪ್ತ ಸಂಕೇತ ಮುಂದಿನ ಆನ್‌ಲೈನ್ ವ್ಯವಹಾರದಲ್ಲಿ ಬಳಸುವುದು ಕಡ್ಡಾಯ.
ಗುಪ್ತಸಂಕೇತವನ್ನು ಕಾರ್ಡುದಾರರು ಮಾತ್ರ ತಿಳಿದಿರುವ ಕಾರಣ, ಒಂದು ವೇಳೆ ಇತರರು ನಿಮ್ಮ ಕಾರ್ಡ್ ನಂಬರ್ ಬಳಸಿ ಆನ್‌ಲೈನ್ ಶಾಪಿಂಗ್ ನಡೆಸುವ ಕುತಂತ್ರಕ್ಕೆ ಮುಂದಾದರೂ ಅದು ಯಶಸ್ವಿಯಾಗದು.
ಭಾರತೀಯ ಸ್ಟೇಟ್ ಬ್ಯಾಂಕ್‌ನ ಡೆಬಿಟ್ ಕಾರ್ಡ್ ಪಿನ್ ಆಧರಿತವಾಗಿದ್ದು, ಹೆಚ್ಚುವರಿ ಭದ್ರತೆ ಈಗಾಗಲೇ ಒದಗಿಸಲಾಗಿದೆ. ಹಾಗಾಗಿ ಎಸ್‌ಬಿಐ ಡೆಬಿಟ್ ಕಾರ್ಡ್ ಬಳಕೆದಾರರು ಮತ್ತೊಮ್ಮೆ ಗುಪ್ತಸಂಕೇತಕ್ಕಾಗಿ ಅರ್ಜಿ ಗುಜರಾಯಿಸಬೇಕಾಗಿಲ್ಲ. ಆದರೆ ಕ್ರೆಡಿಟ್ ಕಾರ್ಡ್‌ದಾರರು ಗುಪ್ತಸಂಕೇತಕ್ಕಾಗಿ ಮನವಿ ಮಾಡಿಕೊಳ್ಳಬೇಕು ಎಂದು ಸ್ಟೇಟ್ ಬ್ಯಾಂಕ್ ತಿಳಿಸಿದೆ.
ಅಲ್ಲದೆ ಪ್ರತ್ಯಕ್ಷ ಶಾಪಿಂಗ್ ಸಂದರ್ಭದಲ್ಲಿ ದೊಡ್ಡ ಮೊತ್ತದ ವ್ಯವಹಾರ ನಡೆಸಲು ಗ್ರಾಹಕರು ಮುಂದಾದರೆ, ಫೋಟೋ ಹೊಂದಿರುವ ಗುರುತಿನ ಚೀಟಿ (ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಮುಂತಾದುವು)ಯನ್ನು ಪುರಾವೆಗಾಗಿ ತೋರಿಸುವಂತೆ ವ್ಯವಹಾರಸ್ಥರು ಬೇಡಿಕೆಯಿಡಬೇಕು ಎಂದೂ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿತ್ತು.
ಯಾರ‌್ಯಾರದೋ ಕಾರ್ಡುಗಳನ್ನು ಬಳಸಿ ಇತ್ತೀಚೆಗೆ ಮೋಸ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಆರ್‌ಬಿಐ ಮುಂದಾಗಿದೆ. ಈಗಾಗಲೇ ಹಲವು ಬ್ಯಾಂಕುಗಳು ಗುರುತಿನ ಚೀಟಿಗೆ ಬೇಡಿಕೆಯಿಡುವಂತೆ ಶಾಪಿಂಗ್ ಮಾಲ್‌ಗಳು ಹಾಗೂ ವ್ಯವಹಾರದ ಸಂದರ್ಭದಲ್ಲಿ ಗುರುತಿನ ಚೀಟಿಯನ್ನು ಜತೆಗೆ ಇಟ್ಟುಕೊಳ್ಳುವಂತೆ ಗ್ರಾಹಕರಿಗೆ ಮನವಿ ಮಾಡಿಕೊಂಡಿವೆ.