ಸರ್ಚ್ ಇಂಜಿನ್ ದೈತ್ಯ ಗೂಗಲ್ ವಿರುದ್ಧ ತೊಡೆ ತಟ್ಟಿ ನಿಂತಿರುವ ಸಾಫ್ಟ್‌ವೇರ್ ದಿಗ್ಗಜ ಮೈಕ್ರೋಸಾಫ್ಟ್, ತನ್ನ ಹೊಸ ಸರ್ಚ್ ಇಂಜಿನ್ 'ಬಿಂಗ್'ಗಾಗಿ ಯಾಹೂ ಜತೆ 10 ವರ್ಷಗಳ ಒಪ್ಪಂದ ಮಾಡಿಕೊಂಡಿದೆ.
ಒಪ್ಪಂದದ ಪ್ರಕಾರ ಇನ್ನು ಮುಂದೆ ಯಾಹೂ ಸೈಟ್‌ಗಳಲ್ಲಿ 'ಬಿಂಗ್' ಸರ್ಚ್ ಇಂಜಿನ್ ಕಾಣಿಸಿಕೊಳ್ಳಲಿದೆ. ಪ್ರಸಕ್ತ ಶೋಧ ಮಾರುಕಟ್ಟೆಯಲ್ಲಿ ಶೇಕಡಾ 60ರಷ್ಟು ಪಾಲು ಗೂಗಲ್‌ನದ್ದಿದೆ. ಎರಡನೇ ಸ್ಥಾನದಲ್ಲಿ ಬಿಂಗ್ ಶೇ.16 ಹಾಗೂ ಮೂರನೇ ಸ್ಥಾನದಲ್ಲಿ ಯಾಹೂ ಶೇ.10ರ ಪಾಲು ಹೊಂದಿದೆ.
ಯಾಹೂ ಮತ್ತು ಮೈಕ್ರೋಸಾಫ್ಟ್ ಶೋಧ ಕ್ಷೇತ್ರದಲ್ಲಿ ವಿಲೀನಗೊಂಡಿರುವುದರಿಂದ ಗೂಗಲ್‌ಗೆ ಕಠಿಣ ಸವಾಲು ಎದುರಾಗಬಹುದು ಎಂದೇ ತಂತ್ರಜ್ಞಾನ ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಹಲವಾರು ತಿಂಗಳುಗಳಿಂದ ಈ ಸಂಬಂಧ ಎರಡೂ ಸಂಸ್ಥೆಗಳ ನಡುವೆ ಮಾತುಕತೆ ನಡೆಯುತ್ತಿತ್ತು. ಇದೀಗ 10 ವರ್ಷಗಳ ಒಪ್ಪಂದಕ್ಕೆ ಬರಲಾಗಿದ್ದು, ಯಾಹೂ ಸೈಟ್‌ನಲ್ಲಿ ಕಾಣಿಸಿಕೊಳ್ಳಲಿರುವ ಬಿಂಗ್ ಸರ್ಚ್ ಇಂಜಿನ್‌ನಲ್ಲಿನ ಜಾಹಿರಾತುಗಳ ಹಂಚಿಕೆಯನ್ನು ಅದೇ ಕಂಪನಿಯ ಜವಾಬ್ದಾರಿ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.
ಎರಡೂ ಕಂಪನಿಗಳು ಪ್ರತ್ಯೇಕ ಜಾಹೀರಾತು ಪ್ರದರ್ಶನ ವ್ಯವಹಾರಗಳನ್ನು ನಡೆಸಲಿದ್ದು, ಮಾರಾಟ ಸಾಮರ್ಥ್ಯವನ್ನು ಭಿನ್ನವಾಗಿಯೇ ಮುಂದುವರಿಸಲಿವೆ.