ಏರ್ ಇಂಡಿಯಾ ಸರಕಾರದ ಮಾಲಕತ್ವದ್ದು, ಅಂದರೆ ಜನತೆ ನೀಡಿದ ತೆರಿಗೆ ಹಣದಿಂದ ಸೃಷ್ಟಿಯಾದದ್ದು. ಅದಕ್ಕೆ ಪರಿಹಾರ ಧನ ನೀಡುವುದಾದರೆ ಖಾಸಗಿ ವಿಮಾನಯಾನ ಸಂಸ್ಥೆಗಳಿಗೂ ನೀಡಬೇಕು. ಯಾಕೆಂದರೆ ನಮ್ಮದು ಶೇರುದಾರರ ಹಣ, ಅವರು ಕೂಡ ಈ ದೇಶದ ನಾಗರಿಕರಲ್ಲವೇ ಎಂದು ಕಿಂಗ್ ಫಿಶರ್ ಏರ್‌ಲೈನ್ಸ್ ಮಾಲಕ ವಿಜಯ ಮಲ್ಯ ಆಗ್ರಹಿಸಿದ್ದಾರೆ.
ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾಕ್ಕೆ ಕೇಂದ್ರ ಸರಕಾರವು ಪರಿಹಾರ ಧನ ನೀಡಲಿದೆ ಎಂಬ ವರದಿಗಳ ಹಿನ್ನಲೆಯಲ್ಲಿ ಮಲ್ಯ ಈ ಪ್ರಶ್ನೆಗಳನ್ನೆತ್ತಿದ್ದಾರೆ. ಖಾಸಗಿ ವಿಮಾನಯಾನ ಸಂಸ್ಥೆಗಳ ಆಹ್ಲಾದಕರ ಸಮಯವು ಮುಕ್ತಾಯ ಕಂಡಿದೆ ಎಂದಿರುವ ಅವರು, ಸಹಾಯಕ್ಕೆ ಬರುವಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ.
"ಏರ್ ಇಂಡಿಯಾವು ಸರಕಾರದ ಮಾಲಕತ್ವದ್ದು, ಆದರೆ ಅದು ತೆರಿಗೆದಾರರ ಹಣ. ನಮ್ಮದು ಶೇರುದಾರರ ಹಣ. ಶೇರು ಹೂಡಿಕೆದಾರರು ಕೂಡ ಈ ದೇಶದ ಪ್ರಜೆಗಳು. ಏರ್ ಇಂಡಿಯಾಕ್ಕೆ ಸರಕಾರವು ಆರ್ಥಿಕ ಸಹಾಯ ಮಾಡುವುದಾದರೆ, ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಯಾಕೆ ಮಾಡಬಾರದು?" ಎಂದು ವಾರ್ತಾವಾಹಿನಿಯೊಂದರ ಜತೆ ಮಾತನಾಡುತ್ತಾ ಅವರು ಪ್ರಶ್ನಿಸಿದರು.
ಮಂಗಳವಾರವಷ್ಟೇ ಅವರ ಮಾಲಕತ್ವದ ಕಿಂಗ್‌ಫಿಶರ್ ತನ್ನ ಉದ್ಯೋಗಿಗಳ ವೇತನ ಪಾವತಿ ವಿಳಂಬ ಮಾಡುವುದಾಗಿ ಇ-ಮೇಲ್ ಕಳುಹಿಸಿತ್ತು.
ಕಿಂಗ್‌ಫಿಶರ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹಿತೇಶ್ ಪಟೇಲ್ ಉದ್ಯೋಗಿಗಳಿಗೆ ಕಳುಹಿಸಿರುವ ಇ-ಮೇಲ್ ಸಂದೇಶವನ್ನು ಉತ್ಪ್ರೇಕ್ಷೆಗೊಳಿಸಬೇಡಿ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಪ್ರತೀ ತಿಂಗಳು ಆರಂಭಿಕ ದಿನದಂದು ವೇತನ ಪಡೆಯುತ್ತಿದ್ದವರು ಗರಿಷ್ಠ ಒಂದು ವಾರದಷ್ಟು ಕಾಯಬೇಕಾದೀತು. ಅದಕ್ಕೂ ಮೊದಲು ಪಾವತಿಗೆ ಯತ್ನಿಸುತ್ತೇವೆ. ಖಂಡಿತಾ ಏಳನೇ ತಾರೀಕನ್ನು ಮೀರಲು ನಾವು ಬಿಡುವುದಿಲ್ಲ ಎಂದಷ್ಟೇ ಪಟೇಲ್ ಇ-ಮೇಲ್ ಮಾಡಿದ್ದಾರೆ ಎಂದು ಮಲ್ಯ ವಿವರಿಸಿದ್ದಾರೆ.
ಕಚ್ಚಾ ತೈಲ ಬೆಲೆ ಪ್ರತೀ ಬ್ಯಾರೆಲ್‌ಗೆ 150 ಡಾಲರ್ ತಲುಪಿದ ವರ್ಷವೇ (2008) ಏರ್‌ಲೈನ್ಸ್ ಉದ್ಯಮದ ಶುಭಕಾಲವು ಮುಗಿದು ಹೋಗಿದೆ ಎಂದು ತನ್ನ ಮಾತನ್ನು ಅವರು ಪುನರುಚ್ಛರಿಸಿದರು.
ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಕಿಂಗ್‌ಫಿಶರ್ ವಿಮಾನಯಾನ ಸಂಸ್ಥೆಯು 240 ಕೋಟಿ ರೂಪಾಯಿಗಳ ನಷ್ಟ (ಪ್ರತೀ ದಿನ ಸುಮಾರು 2 ಕೋಟಿಗೂ ಅಧಿಕ) ಅನುಭವಿಸಿದೆ ಎಂದು ಹೇಳಲಾಗಿದೆ.