ಸತತ ಎರಡು ವಾರಗಳಲ್ಲಿ ಆಂಶಿಕ ಏರಿಕೆ ದಾಖಲಿಸಿದ್ದ ಹಣದುಬ್ಬರ ದರವು ಜುಲೈ 18ಕ್ಕೆ ಕೊನೆಗೊಂಡ ವಾರದಲ್ಲಿ ಶೇ.(-)1.54ಕ್ಕೆ ಕುಸಿತ ಕಂಡಿದೆ. ಈ ಹಿಂದಿನ ವಾರದಲ್ಲಿ ಇದು ಶೇ.(-)1.17ರಲ್ಲಿತ್ತು.
ಸಗಟು ಸೂಚ್ಯಂಕ ದರವು ಕಳೆದ ವರ್ಷದ ಇದೇ ವಾರದಲ್ಲಿ ಶೇ.12.54ರ ಗರಿಷ್ಠ ಮಟ್ಟವನ್ನು ತಲುಪಿತ್ತು. ಪ್ರಸಕ್ತ ವಾರದಲ್ಲಿ ಆಹಾರ ಪದಾರ್ಥಗಳಾದ ಜಿನಸುಗಳು, ಧಾನ್ಯಗಳು, ಫಲವಸ್ತುಗಳು ಹಾಗೂ ತರಕಾರಿ ದುಬಾರಿಯಾಗಿದ್ದರೂ ಹಣದುಬ್ಬರ ದರವು ಕುಸಿತ ಕಂಡಿದೆ.
ಜುಲೈ 18ಕ್ಕೆ ಕೊನೆಗೊಂಡ ವಾರದಲ್ಲಿ ಆಹಾರ ವಸ್ತುಗಳಾದ ಕುರಿ ಮಾಂಸ ಶೇ.14, ಬೇಳೆಕಾಳು ಶೇ.9, ಕಡಲೆ ಶೇ.4, ಫಲವಸ್ತು ಮತ್ತು ತರಕಾರಿ ಶೇ.2ರಷ್ಟು ದುಬಾರಿಯಾಗಿತ್ತು.
ಸಾಮಾನ್ಯ ದಿನಬಳಕೆಯ ವಸ್ತುಗಳಾದ ಖಾದ್ಯ ತೈಲ, ಅಕ್ಕಿ ತೌಡಿನೆಣ್ಣೆ, ತೆಂಗಿನೆಣ್ಣೆ, ಸಕ್ಕರೆ, ಬೆಣ್ಣೆ, ತುಪ್ಪ ಮತ್ತು ವಿಶಿಷ್ಟ ಬೆಲ್ಲ ಕೂಡ ಇದೇ ವಾರ ಕೈಗೆಟುಕದಂತಾಗಿತ್ತು.
ಅದೇ ಹೊತ್ತಿಗೆ ಖನಿಜ ಸೂಚ್ಯಂಕದಲ್ಲಿ ಬೃಹತ್ ಕುಸಿತ ದಾಖಲಾಗಿತ್ತು. ಕಬ್ಬಿಣದ ಅದಿರು ಶೇ.24 ಹಾಗೂ ಫೆಲ್ಸ್‌ಪರ್ ಶೇ.3ರಷ್ಟು ದರ ಕುಸಿತ ಕಂಡ ಕಾರಣ ಖನಿಜಾಂಶ ಸೂಚ್ಯಂಕವು ಶೇ.16.8ರ ಹಿನ್ನಡೆ ಅನುಭವಿಸಿತ್ತು.
ಇದೇ ವಾರದಲ್ಲಿ ವೈಮಾನಿಕ ತೈಲ ಬೆಲೆಯಲ್ಲೂ ಶೇ.7ರ ಕುಸಿತ ದಾಖಲಾಗಿತ್ತು. ಜತೆಗೆ ಸಿಮೆಂಟು ದರವೂ ಕುಸಿತ ಕಂಡಿದ್ದರಿಂದ ಒಟ್ಟಾರೆ ಹಣದುಬ್ಬರ ದರವು ಮತ್ತೆ ಹಿಂಜರಿತ ಹಾದಿ ಹಿಡಿಯಲು ಕಾರಣವಾಯಿತು ಎಂದು ಹೇಳಲಾಗಿದೆ.