ರಿಲಯೆನ್ಸ್ ಇಂಡಸ್ಟ್ರೀಸ್ ಮತ್ತು ಆರ್‌ಎನ್‌ಆರ್‌ಎಲ್ ನಡುವಿನ ಅನಿಲ ವಿವಾದ ಪ್ರಕರಣದ ಅಂತಿಮ ವಿಚಾರಣೆಯನ್ನು ಸೆಪ್ಟೆಂಬರ್ 1ರಂದು ನಡೆಸಲು ಸಾಧ್ಯವಿಲ್ಲ ಎಂದಿರುವ ಸರ್ವೋಚ್ಛ ನ್ಯಾಯಾಲಯ, ಅನಿಲ್ ಅಂಬಾನಿ ಸಮೂಹ ಸಂಸ್ಥೆಯ ತ್ವರಿತ ಇತ್ಯರ್ಥ ಮನವಿಯನ್ನು ತಳ್ಳಿ ಹಾಕಿದೆ.
ವಿವಾದಕ್ಕೆ ಸಂಬಂಧಪಟ್ಟಂತೆ ಹಲವು ಮನವಿಗಳನ್ನು ಪರಿಗಣನೆಗೆ ತೆಗೆದುಕೊಂಡ ನಂತರ ಸೆಪ್ಟೆಂಬರ್ ಒಂದರಂದು ಅಂತಿಮ ವಿಚಾರಣೆಯ ದಿನಾಂಕವನ್ನು ನಿರ್ಧರಿಸಲಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮುಖ್ಯಸ್ಥರಾಗಿರುವ ನ್ಯಾಯಪೀಠ ತಿಳಿಸಿದೆ.
ಅನಿಲ್ ಅಂಬಾನಿಯವರ ಆರ್‌ಎನ್‌ಆರ್‌ಎಲ್ ಸಂಸ್ಥೆಯನ್ನು ಪ್ರತಿನಿಧಿಸಿದ್ದ ವಕೀಲ ಮುಕುಲ್ ರೋಹಟ್ಗಿಯವರು ಅಂತಿಮ ವಿಚಾರಣೆಯನ್ನು ಸೆಪ್ಟೆಂಬರ್ ಒಂದರಂದು ನಡೆಸುವಂತೆ ಮನವಿ ಸಲ್ಲಿಸಿದ್ದರು.
ಮುಖೇಶ್ ಅಂಬಾನಿ ನೇತೃತ್ವದ ರಿಲಯೆನ್ಸ್ ಇಂಡಸ್ಟ್ರೀಸ್, ಸರಕಾರ ಮತ್ತು ಅನಿಲ ಬಳಕೆದಾರರನ್ನು ಉಲ್ಲೇಖಿಸುತ್ತಾ ಮುಕುಲ್, "ಸಂಬಂಧಪಟ್ಟವರು ಎಲ್ಲಾ ಇಲ್ಲೇ ಇದ್ದಾರೆ" ಎಂದರು.
ಆದರೆ ಇದನ್ನು ಆಕ್ಷೇಪಿಸಿದ ರಿಲಯೆನ್ಸ್ ವಕೀಲ ಹರೀಶ್ ಸಾಲ್ವೆಯವರು, ಅಂತಿಮ ವಿಚಾರಣೆಯನ್ನು ಮುಂಚಿತವಾಗಿ ನಡೆಸುವ ಅಗತ್ಯವೇನಿದೆ. ಇದರಿಂದ ಯಾವ ಸಾರ್ವಜನಿಕ ಹಿತಾಸಕ್ತಿ ಪ್ರಚುರವಾಗುತ್ತದೆ ಎಂದು ಪ್ರಶ್ನಿಸಿದರು.
ಅದೇ ಹೊತ್ತಿಗೆ ಮಧ್ಯ ಪ್ರವೇಶಿಸಿದ ನ್ಯಾಯಲಯವು ರೋಹಟ್ಗಿಯವರಲ್ಲಿ, ಆರ್‌ಎನ್‌ಆರ್‌ಎಲ್ ಮಧ್ಯಂತರ ವ್ಯವಸ್ಥೆಯನ್ನು ಬಯಸುತ್ತಿದೆಯೇ ಅಥವಾ ಅಂತಿಮ ವಿಚಾರಣೆಯನ್ನೇ ಎಂದು ಪ್ರಶ್ನಿಸಿತು. ಅದಕ್ಕವರು ಮಧ್ಯಂತರ ವ್ಯವಸ್ಥೆ ಬಗ್ಗೆ ನಾವು ಎದುರು ನೋಡುತ್ತಿಲ್ಲ ಎಂದು ಉತ್ತರಿಸಿದರು.
ಸರಕಾರವೂ ಈ ವಿವಾದವನ್ನು ಬೇಗನೆ ಮುಗಿಸಲು ಬಯಸುತ್ತಿದೆ ಎಂದು ಇದೇ ಸಂದರ್ಭದಲ್ಲಿ ಸರಕಾರಿ ವಕೀಲ ಮೋಹನ್ ಪರಾಸರನ್ ಅವರು ಕೂಡ ಮನವಿ ಮಾಡಿಕೊಂಡರು.
ನ್ಯಾಯಾಲಯವು ಈ ವಿವಾದವನ್ನು ಶೀಘ್ರದಲ್ಲೇ ಪರಿಹರಿಸಲು ಯತ್ನಿಸಲಿದೆ. ಆದರೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಸಾಧ್ಯವಿಲ್ಲ ಎಂದಿತು.