ಸ್ವಿಸ್ ಬ್ಯಾಂಕಿನಲ್ಲಿರುವ ಭಾರತೀಯರ ಹಣವನ್ನು ಮರಳಿ ಪಡೆಯಲು ಸರಕಾರವು ನೀತಿಯೊಂದನ್ನು ರೂಪಿಸುವ ಮೂಲಕ ದೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿರುವ ಉದ್ಯಮಿ ರಾಹುಲ್ ಬಜಾಜ್, ಖಾತೆದಾರರ ಗುರುತನ್ನು ಬಹಿರಂಗಪಡಿಸಬಾರದು ಎಂದಿದ್ದಾರೆ.
"ಸ್ವಿಸ್ ಬ್ಯಾಂಕಿನಲ್ಲಿರುವ ಹಣ ದೇಶಕ್ಕೆ ಬರುವಾಗ ಗರಿಷ್ಠ ಪ್ರಮಾಣದಲ್ಲಿ ತೆರಿಗೆ ವಿಧಿಸಿ. ತೆರಿಗೆ ಕಡಿತದ ನಂತರ ಖಾತೆದಾರರಿಗೆ ಕಾನೂನುಬದ್ಧಗೊಂಡ ಹಣವನ್ನು ವಾಪಸು ಮಾಡುವ ಆಮಿಷ ಒಡ್ಡಬೇಕು. ನಿಗದಿತ ಸಮಯದೊಳಗೆ ಆ ಕೆಲಸ ಮಾಡುವಂತೆ ಖಾತೆದಾರರಿಗೆ ಕಠಿಣ ಸೂಚನೆಗಳನ್ನು ನೀಡಿ. ಅದಕ್ಕೆ ತಪ್ಪಿದಲ್ಲಿ ನಂತರ ಪೂರ್ತಿ ಹಣವನ್ನು ಕೈಗೆ ಸಿಗದಂತೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಬೇಕು" ಎಂದು ರಾಜ್ಯಸಭೆಯ ಸ್ವತಂತ್ರ ಸದಸ್ಯ ಬಜಾಜ್ ಸಲಹೆ ಮಾಡಿದರು.
ಹಣಕಾಸು ವಿಧೇಯಕದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದೇಶದ ಬ್ಯಾಂಕುಗಳಲ್ಲಿರುವ ಭಾರತೀಯರ ಹಣವನ್ನು ಮರಳಿ ತರಲು ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದರು. ಖಾತೆದಾರರ ಗುರುತನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸಕೂಡದು. ಅವರ ಹೆಸರು ಸರಕಾರಿ ಅಧಿಕಾರಿಗಳಿಗೂ ತಿಳಿಯದಂತೆ ಮಾಡಬೇಕು ಎಂದು ಬಜಾಜ್ ಸಲಹೆ ನೀಡಿದ್ದಾರೆ.
ಇದಕ್ಕಾಗಿ ಹಲವು ದಾರಿಗಳಿವೆ ಎಂಬುದರತ್ತ ಬೊಟ್ಟು ಮಾಡಿದ ಬಜಾಜ್, ಖಾತೆದಾರರು ತಮ್ಮ ಹಣವನ್ನು 'ಬೇರರ್ಸ್ ಬಾಂಡ್' ಮೂಲಕ ವಾಪಸು ಪಡೆಯಲು ಅವಕಾಶ ನೀಡಿದಲ್ಲಿ, ಅದಕ್ಕೆ ಸರಕಾರವು ಈಗಿರುವ ನೀತಿಯಂತೆ ತೆರಿಗೆ ವಿಧಿಸಬಹುದಾಗಿದೆ ಎಂದರು.
ಇಂತಹ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ ಕೇವಲ ಸಾಮಾನ್ಯರು ಮಾತ್ರ ತಮ್ಮ ಠೇವಣಿಗಳನ್ನು ಘೋಷಿಸಲು ಮುಂದೆ ಬರುತ್ತಾರೆಯೇ ಹೊರತು ಅಗಾಧ ಶ್ರೀಮಂತರಲ್ಲ; ಅಲ್ಲಿ ಠೇವಣಿಯಿಟ್ಟಿದ್ದು ಬಹು ದೊಡ್ಡ ಕುಳಗಳು ಎಂದು ಅವರು ವಿವರಿಸಿದ್ದಾರೆ.
ತೆರಿಗೆ ಪಾವತಿ ಮಾಡಿದ ನಂತರವಷ್ಟೇ ಖಾತೆದಾರರು ತಮ್ಮ ಹಣವನ್ನು ಮರಳಿ ಪಡೆಯುವಂತಾದರೆ ಈಗಿರುವ ನೈತಿಕ ಪ್ರಶ್ನೆಯೂ ದೂರವಾದಂತಾಗುತ್ತದೆ ಎಂದೂ ಬಜಾಜ್ ತಿಳಿಸಿದರು.
ಸ್ವಿಜರ್ಲೆಂಡ್ ಸರಕಾರವು ತನ್ನ ಸ್ವಂತ ನಿರ್ಧಾರದಿಂದ ಹಣವನ್ನು ಭಾರತಕ್ಕೆ ಮರಳಿಸದು ಎಂದು ಈ ಪ್ರಭಾವಿ ಉದ್ಯಮಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಕ್ರಿಯೆ ಆರಂಭವಾಗಿದೆ: ಪ್ರಧಾನಿ ಸ್ವಿಸ್ ಬ್ಯಾಂಕುಗಳ ಭಾರತೀಯರಿಗೆ ಸೇರಿದ ಕಪ್ಪು ಹಣವನ್ನು ವಾಪಸು ಪಡೆಯಲು ಸರಕಾರ ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ರಾಜ್ಯಸಭೆಗೆ ತಿಳಿಸಿದ್ದಾರೆ.
ಬಿಜೆಪಿಯ ಪ್ರಕಾಶ್ ಜಾವದೇಕರ್‌ರವರ ಪ್ರಶ್ನೆಗೆ ಉತ್ತರಿಸುತ್ತಾ ಅವರು ಈ ಮಾಹಿತಿ ನೀಡಿದರು.