ಏರ್‌ಲೈನ್ಸ್‌ಗಳಿಗೆ 2007-08ರಲ್ಲಿ 2444.8 ಕೋಟಿ ರೂ. ನಷ್ಟ
ನವದೆಹಲಿ, ಗುರುವಾರ, 30 ಜುಲೈ 2009( 19:17 IST )
2007-08ರ ಹಣಕಾಸು ವರ್ಷದಲ್ಲಿ ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳು 2,44,483.7 ಲಕ್ಷ ರೂಪಾಯಿಗಳ ನಷ್ಟ ಅನುಭವಿಸಿವೆ ಎಂದು ಸರಕಾರ ಗುರುವಾರ ತಿಳಿಸಿದೆ.
"ಕಳೆದ ವರ್ಷ ಮುಂಚೂಣಿಯ ಏರ್‌ಲೈನ್ಸ್‌ಗಳು 24,448.37 ಮಿಲಿಯನ್ ರೂಪಾಯಿಗಳ ನಷ್ಟ ಅನುಭವಿಸಿವೆ" ಎಂದು ಲೋಕಸಭೆಯ ಪ್ರಶ್ನೆಯೊಂದಕ್ಕೆ ನಾಗರಿಕ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಈ ಅವಧಿಯಲ್ಲಿ ಪ್ಯಾರಾಮೌಂಟ್ ಏರ್‌ವೇಸ್ ಮಾತ್ರ ಲಾಭದಾಯಕ ವ್ಯವಹಾರ ನಡೆಸಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ವಿವರಿಸಿದ್ದಾರೆ.
ನಷ್ಟ ಅನುಭವಿಸಿದ ವಿಮಾನಯಾನ ಸಂಸ್ಥೆಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವುದು ಕಿಂಗ್‌ಫಿಶರ್ ರೆಡ್ ಸಂಸ್ಥೆ. ಇದು ಈ ಅವಧಿಯಲ್ಲಿ 79,834.9 ಲಕ್ಷ ರೂಪಾಯಿಗಳ ಹಿನ್ನಡೆ ಅನುಭವಿಸಿದೆ.
ವಿಮಾನಯಾನ ಸಂಸ್ಥೆಗಳ ಕಳೆದ ಮೂರು ವರ್ಷಗಳ ಲಾಭ-ನಷ್ಟದ ಮಾಹಿತಿ ನೀಡುತ್ತಾ ಸಚಿವರು, ಈ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಜೆಟ್ ಏರ್‌ವೇಸ್ 2,530.63 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದೆ ಎಂದರು.
2005-06 ಮತ್ತು 2006-07ರ ಅವಧಿಯಲ್ಲಿ ದೇಶದ ಮುಂಚೂಣಿ ವಿಮಾನಯಾನ ಸಂಸ್ಥೆಗಳು ಒಟ್ಟು 2,93,822.5 ಲಕ್ಷ ರೂಪಾಯಿಗಳ ನಷ್ಟ ಅನುಭವಿಸಿದೆ ಎಂದಿದ್ದಾರೆ.
ಸ್ಟಾರ್ ಏವಿಯೇಷನ್, ಜಾಗ್ಸನ್ ಏರ್‌ಲೈನ್ಸ್ ಮತ್ತು ಝಾವ್ ಏರ್‌ವೇಸ್ ಎಂಬ ಮೂರು ವಿಮಾನಯಾನ ಸಂಸ್ಥೆಗಳಿಗೆ ದೇಶೀಯ ವೈಮಾನಿಕ ಸೇವೆ ಸಲ್ಲಿಸಲು ಸರಕಾರವು ನಿರಪೇಕ್ಷಣಾ ಪತ್ರ ನೀಡಿದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತಾ ಸಚಿವರು ತಿಳಿಸಿದ್ದಾರೆ.