ಜಾಗತಿಕ ದುರ್ಬಲ ಗತಿಯ ಕಾರಣದಿಂದಾಗಿ ಸತತ ಎರಡನೇ ದಿನವೂ ಕುಸಿತ ಕಂಡಿರುವ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನ 120 ರೂಪಾಯಿಗಳ ಹಿನ್ನಡೆ ದಾಖಲಿಸಿದ್ದು, ಪ್ರತೀ 10 ಗ್ರಾಂ ಬೆಲೆ 14,870 ರೂಪಾಯಿಗಳನ್ನು ತಲುಪಿದೆ.
ಇದೇ ಪ್ರವೃತ್ತಿಯನ್ನು ಬೆಳ್ಳಿ ಕೂಡ ಅನುಸರಿಸಿದೆ. ಪ್ರತೀ ಕೆ.ಜಿ.ಯಲ್ಲಿ 300 ರೂಪಾಯಿಗಳ ಹಿನ್ನಡೆ ಕಂಡಿರುವ ಬೆಳ್ಳಿಯು 22,100 ರೂಪಾಯಿಗಳನ್ನು ಮುಟ್ಟಿತು.
ಕಳೆದ ರಾತ್ರಿ ಲಂಡನ್ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನವು 924.60 ಡಾಲರುಗಳಿಗೆ ಕುಸಿದ ಹಿನ್ನಲೆಯಲ್ಲಿ ದಾಸ್ತಾನುದಾರರು ಕೂಡ ದುರ್ಬಲ ಮಾರುಕಟ್ಟೆಯ ಗತಿಗೆ ಹೊಂದಿಕೊಂಡರು ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಚಿನಿವಾರ ಪೇಟೆಯಿಂದ ಬಂಡವಾಳವನ್ನು ಏರುಗತಿಯಲ್ಲಿರುವ ಶೇರುಮಾರುಕಟ್ಟೆಗೆ ವರ್ಗಾಯಿಸುವ ಪ್ರಕ್ರಿಯೆಗಳೂ ಬಿರುಸಾಗಿ ನಡೆದವು. ಇದರಿಂದಾಗಿ ಬೇಡಿಕೆಯಲ್ಲಿ ಗರಿಷ್ಠ ಮಟ್ಟದ ಕುಸಿತ ಕಂಡು ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನ ಹಿಂಜರಿತ ಎದುರಿಸಿತು ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಉತ್ಕೃಷ್ಟ ಮತ್ತು ಆಭರಣ ಚಿನ್ನ ದರವು ಪ್ರತೀ 10 ಗ್ರಾಂಗಳಿಗೆ 120 ರೂ.ಗಳಂತೆ ಕುಸಿದಿದ್ದು, ಕ್ರಮವಾಗಿ 14,870 ಹಾಗೂ 14,720 ರೂಪಾಯಿಗಳನ್ನು ದಾಖಲಿಸಿದೆ.
ಪವನ್ ಚಿನ್ನ ದರವೂ 25 ರೂಪಾಯಿಗಳ ಕುಸಿತ ಕಂಡಿದೆ. ಇಲ್ಲೀಗ ಎಂಟು ಗ್ರಾಂ ಚಿನ್ನ ಬೆಲೆ 12,450 ರೂಪಾಯಿಗಳು.
ಇದೇ ಗತಿಯನ್ನನುಸರಿಸಿದ ಸಿದ್ಧ ಬೆಳ್ಳಿಯು 300 ರೂಪಾಯಿಗಳ ಕುಸಿತ ಕಂಡು ಪ್ರತೀ ಕೇಜಿಗೆ 22,100 ರೂಪಾಯಿಗಳಿಗೆ ಕುಸಿಯಿತು. ವಾರವನ್ನಾಧರಿಸಿದ ವಿತರಣೆಯಲ್ಲಿ 450 ರೂಪಾಯಿಗಳ ಕುಸಿತ ಕಂಡಿದೆ. ಇಲ್ಲಿ ಪ್ರತೀ ಕೇಜಿ ಬೆಳ್ಳಿ ದರ 21,770 ರೂಪಾಯಿಗಳು.