ನಾರ್ತ್ ಕೆರೊಲಿನಾ, ಶುಕ್ರವಾರ, 31 ಜುಲೈ 2009( 13:27 IST )
ವಿಶ್ವದ ಬೃಹತ್ ಆರ್ಥಿಕ ವ್ಯವಸ್ಥೆಯು ದಶಕಗಳಲ್ಲೇ ಹಿನ್ನಡೆ ಅನುಭವಿಸಿರುವ ಹಿನ್ನಲೆಯಲ್ಲಿ ಆಶಾವಾದದ ಮಾತುಗಳನ್ನಾಡಿರುವ ಅಧ್ಯಕ್ಷ ಬರಾಕ್ ಒಬಾಮಾ, ಅಮೆರಿಕಾವು ಹಿಂಜರಿತದ ಅಂತ್ಯದ ಆರಂಭವನ್ನು ನೋಡುತ್ತಿದೆ ಎಂದು ತಿಳಿಸಿದ್ದಾರೆ.
"ನಿಜ ವಿಚಾರವೇನೆಂಬುದು ಇಲ್ಲಿದೆ: ನಾವು ಅಡ್ಡಾದಿಡ್ಡಿ ಕುಸಿತವನ್ನು ತಡೆದಿದ್ದೇವೆ. ಈಗ ಮಾರುಕಟ್ಟೆ ಏರುಗತಿಯಲ್ಲಿದ್ದು, ಆರ್ಥಿಕ ವ್ಯವಸ್ಥೆಯು ಕುಸಿತದ ಹಂತವನ್ನು ಮೀರುವ ಸನಿಹದಲ್ಲಿದೆ" ಎಂದು ಉದ್ಯೋಗ ಪ್ರಮಾಣ ಮತ್ತು ಗೃಹ ಮಾರುಕಟ್ಟೆ ವೃದ್ಧಿಯನ್ನು ಉದಾಹರಿಸುತ್ತಾ ಒಬಾಮಾ ವಿವರಿಸಿದರು.
"ಹಾಗಾಗಿ ಪರಿಸ್ಥಿತಿ ಸುಧಾರಣೆಯಾಗಿದೆ ಎಂಬುದರ ಬಗ್ಗೆ ಯಾವುದೇ ಸಂಶಯಗಳಿಲ್ಲ. ನಾವು ಬಹುಶಃ ಆರ್ಥಿಕ ಹಿಂಜರಿತದ ಅಂತಿಮ ಘಟ್ಟದ ಆರಂಭವನ್ನು ನೋಡುತ್ತಿದ್ದೇವೆ" ಎಂದರು.
ಇದೀಗ ನಿರುದ್ಯೋಗ ಪ್ರಮಾಣವು ಶೇಕಡಾ 10ರೊಳಗಿದೆ. ಉದ್ಯೋಗ ಕಳೆದುಕೊಂಡವರಲ್ಲಿ ನೀವೂ ಒಬ್ಬರಾಗಿದ್ದರೆ ಮತ್ತು ನಿಮಗೆ ಬೇರೆ ಉದ್ಯೋಗ ಕಂಡುಕೊಳ್ಳಲಾಗದಿದ್ದವರಾಗಿದ್ದರೆ ಇದು ಸ್ವಲ್ಪ ಸಮಾಧಾನ ನೀಡಬಹುದು ಎಂದು ನಾರ್ತ್ ಕೆರೊಲಿನಾದ ಟೌನ್ ಹಾಲ್‌ನಲ್ಲಿ ಮಾತನಾಡುತ್ತಿದ್ದ ಅವರು ತಿಳಿಸಿದ್ದಾರೆ.
ತಾನು ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅಮೆರಿಕಾದಲ್ಲಿ ಉದ್ಯೋಗ ಕಳೆದುಕೊಳ್ಳುತ್ತಿರುವ ಪ್ರಮಾಣ ಪ್ರಸಕ್ತ ಅರ್ಧಕ್ಕೆ ಕುಸಿದಿದೆ ಎಂದೂ ಅವರು ತಿಳಿಸಿದರು.
"ನಾವು ಸಂಪೂರ್ಣ ಸುಧಾರಿಸಿಕೊಳ್ಳಲು ಕಾಲಾವಕಾಶದ ಅಗತ್ಯವಿದೆ" ಎಂಬುದನ್ನು ಒಪ್ಪಿಕೊಂಡ ಒಬಾಮಾ, "ನಾವು ತೆಗೆದುಕೊಂಡ ಕ್ರಮಗಳು, ಒಗ್ಗಟ್ಟಾಗಿ ಸಾಗಿದ್ದು ಹಣಕಾಸು ವ್ಯವಸ್ಥೆಯ ಭಾರೀ ಕುಸಿತವನ್ನು ತಡೆಯಲು ಸಹಕಾರಿಯಾಯಿತು ಎಂಬುದನ್ನು ನಾವು ಮರೆಯಬಾರದು" ಎಂದರು.