ನಷ್ಟದಲ್ಲಿರುವ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸರಕಾರ ಪರಿಹಾರ ಪ್ಯಾಕೇಜ್ ನೀಡಬೇಕು, ವೈಮಾನಿಕ ಇಂಧನ ಬೆಲೆ ಕಡಿತಗೊಳಿಸಬೇಕು ಮತ್ತು ತೆರಿಗೆಗಳನ್ನು ಕಡಿಮೆ ಮಾಡಬೇಕೆಂದು ಬೇಡಿಕೆಯನ್ನಿಟ್ಟಿರುವ ಭಾರತೀಯ ಏರ್‌ಲೈನ್ಸ್‌ಗಳ ಸಂಘಟನೆ(ಎಫ್‌ಐಎ), ಪ್ರತಿಭಟನಾರ್ಥವಾಗಿ ಆಗಸ್ಟ್ 18ರಂದು ದೇಶೀಯ ವೈಮಾನಿಕ ಸೇವೆ ಅಮಾನತುಗೊಳಿಸುವುದಾಗಿ ಘೋಷಿಸಿದೆ.
ಆ ದಿನದ ಪ್ರಯಾಣಕ್ಕಾಗಿ ಟಿಕೆಟ್ ಕಾದಿರಿಸಿರುವ ಪ್ರಯಾಣಿಕರ ಹಣವನ್ನು ವಾಪಸು ಮಾಡಲಾಗುತ್ತದೆ ಎಂದು ಸಂಸ್ಥೆ ಪ್ರಕಟಿಸಿದೆ. ಆಗಸ್ಟ್ 18ರಂದು ಅಂತಾರಾಷ್ಟ್ರೀಯ ಮಾರ್ಗಗಳ ಖಾಸಗಿ ವಿಮಾನಗಳು ಎಂದಿನಂತೆ ಹಾರಾಟ ನಡೆಸಲಿವೆ.
ಖಾಸಗಿ ವಿಮಾನಯಾನ ಸಂಸ್ಥೆಗಳ ಸಭೆಯ ನಂತರ ಮಾತನಾಡಿದ ಕಿಂಗ್‌ಫಿಶರ್ ಏರ್‌ಲೈನ್ಸ್ ಅಧ್ಯಕ್ಷ ವಿಜಯ ಮಲ್ಯ, ಸರಕಾರದಿಂದ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಯಾವುದೇ ಸಹಾಯ ಸಿಗುವ ಸೂಚನೆಗಳಿಲ್ಲದ ಹಿನ್ನಲೆಯಲ್ಲಿ ಆ.18ರಂದು ದೇಶೀಯ ಸೇವೆ ರದ್ದುಪಡಿಸಲು ನಾವು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಖಾಸಗಿ ಕ್ಷೇತ್ರದ ಸಂಸ್ಥೆಗಳು ಭರಿಸಲಾರದಷ್ಟು ನಷ್ಟ ಅನುಭವಿಸುತ್ತಿವೆ. ಇದರ ಪರಿಣಾಮವಾಗಿ ಹಾರಾಟವನ್ನು ಅನಿರ್ದಿಷ್ಟಾವಧಿಯವರೆಗೆ ರದ್ದು ಮಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದರು. ಸಮಸ್ಯೆಗಳು ಪರಿಹಾರ ಕಾಣದಿದ್ದರೆ ತಾವು ವಿಮಾನ ಹಾರಾಟವನ್ನು ನಿಲ್ಲಿಸುವುದು ಅನಿವಾರ್ಯವಾಗುತ್ತದೆ ಎಂದೂ ಅವರು ಎಚ್ಚರಿಸಿದರು.
ಇಲ್ಲಿ ಎಚ್ಚರಿಕೆಯ ಪ್ರಶ್ನೆಯಿಲ್ಲ. ಇದು ನಮ್ಮ ಮನವಿ. ಸಾರ್ವಜನಿಕ ವಲಯ ಸೇರಿದಂತೆ ಎಲ್ಲಾ ದ ವಿಮಾನಯಾನ ಸಂಸ್ಥೆಗಳು ನಷ್ಟದಲ್ಲಿರುವುದು ವಾಸ್ತವ ಸಂಗತಿ ಎಂದು ಜೆಟ್ ಏರ್‌ವೇಸ್ ಮುಖ್ಯಸ್ಥ ನರೇಶ್ ಗೋಯಲ್ ತಿಳಿಸಿದ್ದಾರೆ.
ಕಿಂಗ್‌ಫಿಶರ್, ಜೆಟ್ ಏರ್‌ವೇಸ್, ಸ್ಪೈಸ್‌ಜೆಟ್ ಮತ್ತು ಇಂಡಿಗೋ ಏರ್‌ಲೈನ್ಸ್ ಸೇರಿದಂತೆ ಭಾರತೀಯ ವಿಮಾನಯಾನ ಸಂಸ್ಥೆಗಳ ಸಂಘಟನೆಯ ಸದಸ್ಯ ಸಂಸ್ಥೆಗಳು ಭಾಗವಹಿಸಿದ್ದ ಈ ಸಭೆಯಲ್ಲಿ ಪ್ರತಿಭಟನೆ ನಡೆಸುವ ನಿರ್ಧಾರಕ್ಕೆ ಬರಲಾಯಿತು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅನಿಲ್ ಬೈಜಾಲ್ ತಿಳಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಸರಕಾರಿ ಮಾಲಕತ್ವದ ಏರ್ ಇಂಡಿಯಾ ಪಾಲ್ಗೊಳ್ಳುತ್ತಿಲ್ಲ.
ಎಫ್‌ಐಎ ಪ್ರಕಾರ ವೈಮಾನಿಕ ಉದ್ಯಮವು 57,000 ಕೋಟಿ ರೂಪಾಯಿಗಳ ನಷ್ಟ ಅನುಭವಿಸಲಿದೆ. 2008-09ರ ಸಾಲಿನಲ್ಲಿ ಇದು 10,000 ಕೋಟಿಗಳಾಗಿದ್ದವು.