ಐದು ಬೋಯಿಂಗ್ 777 ವಿಮಾನಗಳ ಬೇಡಿಕೆಯನ್ನು ಆರ್ಥಿಕ ಸಂಕಷ್ಟದಲ್ಲಿರುವ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವು ರದ್ದು ಮಾಡಿದೆ ಎಂದು ವರದಿಯೊಂದು ತಿಳಿಸಿದೆ. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಏರ್ ಇಂಡಿಯಾ ಮತ್ತು ಬೋಯಿಂಗ್ ಸಂಸ್ಥೆಗಳು ನಿರಾಕರಿಸಿವೆ.
ಅಲ್ಲದೆ ಅಮೆರಿಕಾ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ 27 ಬಿ-787 ವಿಮಾನವನ್ನು ಕ್ಲಪ್ತ ಸಮಯದಲ್ಲಿ ಏರ್ ಇಂಡಿಯಾಕ್ಕೆ ನೀಡಲು ವಿಫಲವಾಗಿರುವುದಕ್ಕೆ ಏರ್ ಇಂಡಿಯಾ 710 ಮಿಲಿಯನ್ ಅಮೆರಿಕನ್ ಡಾಲರ್ ಪರಿಹಾರವನ್ನೂ ಕೇಳಿದೆ ಎಂದು ಪತ್ರಿಕೆ ವರದಿ ಮಾಡಿದೆ.
"ಇಂಜಿನಿಯರಿಂಗ್ ವಿಭಾಗವು ಈಗಾಗಲೇ ವಿಮಾನ ಖರೀದಿಯನ್ನು ರದ್ದು ಮಾಡಿ ಆದೇಶ ಹೊರಡಿಸಿದೆ" ಎಂದು ಏರ್ ಇಂಡಿಯಾ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ಜಾದವ್ ತಿಳಿಸಿದ್ದಾರೆಂದು ಪತ್ರಿಕೆ ವರದಿಯಲ್ಲಿ ತಿಳಿಸಿದೆ.
ಬೋಯಿಂಗ್ ಸಂಸ್ಥೆಯು 27 ಬಿ-787 ವಿಮಾನಗಳನ್ನು ಏರ್ ಇಂಡಿಯಾ ಬೇಡಿಕೆ ಇಟ್ಟಿದ್ದ ಸಮಯದೊಳಗೆ ಪೂರೈಸಲು ವಿಫಲವಾಗಿರುವುದರಿಂದ ಸಂಸ್ಥೆಯು ಅಪಾರ ನಷ್ಟ ಅನುಭವಿಸಿದೆ ಎಂದೂ ಅವರು ಆರೋಪಿಸಿದ್ದಾರೆ.
"ಇದರಿಂದಾಗಿ ಏರ್ ಇಂಡಿಯಾದ ಸಂಪೂರ್ಣ ಲೆಕ್ಕಾಚಾರವೇ ಅಡಿಮೇಲಾಗಿದೆ. ನೀಡಿದ ಗಡುವಿನೊಳಗೆ ವಿಮಾನ ಪೂರೈಸಲು ವಿಫಲವಾದ ಸಂಸ್ಥೆಯಿಂದ ನಾವು 710 ಮಿಲಿಯನ್ ಡಾಲರ್ ಪರಿಹಾರವನ್ನು ಕೇಳಿದ್ದೇವೆ" ಎಂದು ಏರ್ ಇಂಡಿಯಾ ಮುಖ್ಯಸ್ಥರು ಪತ್ರಿಕೆಗೆ ತಿಳಿಸಿದ್ದಾರೆ.
2006ರಲ್ಲಿ ಏರ್ ಇಂಡಿಯಾವು ಬೋಯಿಂಗ್ ಜತೆ 68 ವಿಮಾನಗಳ ಬೇಡಿಕೆಯ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದ ಪ್ರಕಾರ ವ್ಯವಹಾರದ ಒಟ್ಟು ಮೊತ್ತ ಎಂಟು ಬಿಲಿಯನ್ ಡಾಲರ್‌ಗಳು.
ಇದೀಗ ವಿಮಾನಯಾನ ಸಂಸ್ಥೆಯು 777, 27-787-8 ಮಾಡೆಲ್‌ನ 23 ಡ್ರೀಮ್‌ಲೈನರ್ಸ್ ವಿಮಾನಗಳು ಹಾಗೂ 737-800ರ ನೂತನ 18 ವಿಮಾನಗಳನ್ನು ಖರೀದಿಸಲಿದೆ ಎಂದು ಹೇಳಲಾಗಿದೆ.