ವಿಮಾನ ಮುಷ್ಕರಕ್ಕೆ ಬೆಂಬಲವಿಲ್ಲ; ಮಾತುಕತೆಗೆ ಬನ್ನಿ- ಸರ್ಕಾರ
ನವದೆಹಲಿ, ಶನಿವಾರ, 1 ಆಗಸ್ಟ್ 2009( 10:06 IST )
ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗುವ ಯಾವುದೇ ನಡೆಯನ್ನು ನಾವು ಬೆಂಬಲಿಸುವುದಿಲ್ಲ; ನಮ್ಮ ಜತೆ ಮಾತುಕತೆಗೆ ಬನ್ನಿ ಎಂದು ಆಗಸ್ಟ್ 18ರಂದು ದೇಶೀಯ ವೈಮಾನಿಕ ಸೇವೆ ರದ್ದುಗೊಳಿಸಿರುವ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಸರಕಾರ ಕರೆ ನೀಡಿದೆ.
ವೈಮಾನಿಕ ಕ್ಷೇತ್ರವು ಎದುರಿಸುತ್ತಿರುವ ಸಮಸ್ಯೆಗಳನ್ನು ಸರಕಾರ ಅರ್ಥ ಮಾಡಿಕೊಂಡಿದೆ. ಹಾಗೆಂದು ದೇಶದ ಜನತೆಯ ಪ್ರಯಾಣಕ್ಕೆ ಅನನುಕೂಲವಾಗುವ ಯಾವುದೇ ಬೆಳವಣಿಗಗಳಿಗೆ ಸರಕಾರ ಬೆಂಬಲ ನೀಡದು. ಸರಕಾರದ ಜತೆಗೆ ಮಾತುಕತೆಗೆ ಸಿದ್ಧರಾಗಿ ಎಂದು ನಾನು ಏರ್‌ಲೈನ್ಸ್‌ಗಳಿಗೆ ಸಲಹೆ ನೀಡುತ್ತೇನೆ ಎಂದು ನಾಗರಿಕ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.
ಭಾರತೀಯ ವೈಮಾನಿಕ ಒಕ್ಕೂಟದ ಮುಂಬೈ ಸಭೆಯಲ್ಲಿ ಕೇಳಿ ಬಂದ ವಿಚಾರಗಳನ್ನು ಉಲ್ಲೇಖಿಸುತ್ತಾ ಪಟೇಲ್, "ವೈಮಾನಿಕ ಇಂಧನ ತೆರಿಗೆ ರಾಜ್ಯಗಳಿಗೆ ಸಂಬಂಧಪಟ್ಟದ್ದು. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಕಳೆದ ಕೆಲವು ವರ್ಷಗಳಿಂದ ವೈಮಾನಿಕ ಸಚಿವಾಲಯವು ರಾಜ್ಯಗಳಿಗೆ ಮನವಿ ಮಾಡಿಕೊಂಡಿದೆ" ಎಂದರು.
2008-09ರ ಅವಧಿಯಲ್ಲಿ ವೈಮಾನಿಕ ಇಂಧನ ಬೆಲೆಯೇರಿಕೆಗೆ ಜಾಗತಿಕ ಕುಸಿತವು ಪ್ರಮುಖ ಕಾರಣವಾಯಿತು ಎಂದು ಅಭಿಪ್ರಾಯಪಟ್ಟರು.
ಖಾಸಗಿ ವಿಮಾಯಾನ ಸಂಸ್ಥೆಗಳ ಮುಷ್ಕರದಲ್ಲಿ ಏರ್ ಇಂಡಿಯಾ ಪಾಲ್ಗೊಳ್ಳುವುದಿಲ್ಲ ಎಂಬುದನ್ನು ಸಚಿವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. "ಆಯ್ದ ಖಾಸಗಿ ಏರ್‌ಲೈನ್ಸ್‌ಗಳ ನಿರ್ಧಾರಕ್ಕೆ ಏರ್ ಇಂಡಿಯಾ ಪಾಲ್ಗೊಳ್ಳುವುದಿಲ್ಲ. ರಾಷ್ಟ್ರೀಯ ವಿಮಾನಯಾನ ಸಂಸ್ಥೆಯು ಆ ದಿನ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೆಚ್ಚುವರಿ ವಿಮಾನಗಳ ಸೇವೆ ಒದಗಿಸಲಿದೆ" ಎಂದರು.