ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇಂಧನ ದುಬಾರಿ; ವೈಮಾನಿಕ ಕ್ಷೇತ್ರಕ್ಕೆ ಮತ್ತೊಂದು ಗುದ್ದು
(Jet fuel | Aviation turbine fuel | Indian Oil Corporation | Kingfisher)
ಖಾಸಗಿ ವಿಮಾನಯಾನ ಸಂಸ್ಥೆಗಳು ವೈಮಾನಿಕ ಇಂಧನ ದರವನ್ನು ಇಳಿಕೆ ಮಾಡಬೇಕು ಎಂದು ಒತ್ತಾಯಿಸಿ ಆಗಸ್ಟ್ 18ರಂದು ದೇಶವ್ಯಾಪಿ ವೈಮಾನಿಕ ಸಂಚಾರ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದ ಬೆನ್ನಲ್ಲೇ ಅತ್ತ ವೈಮಾನಿಕ ಇಂಧನ ದರದಲ್ಲಿ ಶೇ.1.6ರ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾದ ಕಾರಣ ಈ ಆಂಶಿಕ ಏರಿಕೆಯನ್ನು ಮಾಡಲಾಗಿದೆ. ದೆಹಲಿಯಲ್ಲಿ ಪ್ರತೀ ಲೀಟರ್ ವೈಮಾನಿಕ ಇಂಧನಕ್ಕೀಗ 585 ರೂಪಾಯಿಗಳ ಹೆಚ್ಚಳವಾಗಿದ್ದು, 36,923 ರೂಪಾಯಿಗಳನ್ನು ತಲುಪಿದೆ. ನಿನ್ನೆ ಮಧ್ಯರಾತ್ರಿಯಿಂದಲೇ ಇದು ಜಾರಿಗೆ ಬಂದಿದೆ.
ಎರಡು ವಾರಗಳ ಹಿಂದಷ್ಟೇ ಜೆಟ್ ಇಂಧನ ದರದಲ್ಲಿ ಶೇ.5.7ರ ಇಳಿಕೆ ಮಾಡಲಾಗಿತ್ತು. ಇದೀಗ ಮತ್ತೆ ಏರುಗತಿಯತ್ತ ತನ್ನ ಪಥವನ್ನು ಮಾರುಕಟ್ಟೆ ಬದಲಾಯಿಸಿದೆ.
ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಗೆ ಹೊಂದಿಕೊಂಡು ಕಳೆದೆರಡು ತಿಂಗಳುಗಳ ಅವಧಿಯಲ್ಲಿ ನಾಲ್ಕು ಬಾರಿ ವೈಮಾನಿಕ ಇಂಧನ ಬೆಲೆಯಲ್ಲಿ ಹೆಚ್ಚಳ ಮಾಡಿದ್ದವು. ಮೇ 1ರಂದು ಪ್ರತೀ ಕಿಲೋ ಲೀಟರ್ ವೈಮಾನಿಕ ಇಂಧನಕ್ಕೆ 31,614.51 ರೂಪಾಯಿಗಳಿದ್ದ ಬೆಲೆಯು ನಾಲ್ಕು ಬಾರಿಯ ಪರಿಷ್ಕರಣೆಯ ನಂತರ ಜುಲೈ 1ರಂದು 38,557.56 ರೂಪಾಯಿಗಳನ್ನು ಮುಟ್ಟಿತ್ತು.
ಜೂನ್ 16ರಂದು ಇದು 36,338 ರೂಪಾಯಿಗಳಿಗೆ ಇಳಿಕೆ ಕಂಡಿತ್ತು. "ಆ ನಂತರ ಅಂತಾರಾಷ್ಟ್ರೀಯ ದರಗಳು ಏರಿಕೆಯಾಗಿವೆ. ಹಾಗಾಗಿ ಇದು ಅನಿವಾರ್ಯವಾಗಿತ್ತು" ಎಂದು ತೈಲ ಸಂಸ್ಥೆಗಳು ತಿಳಿಸಿವೆ.
ದೇಶದ ಜನಜಂಗುಳಿಯಿರುವ ವಿಮಾನನಿಲ್ದಾಣ ಮುಂಬೈಯಲ್ಲಿ ಪ್ರತೀ ಕಿಲೋ ಲೀಟರ್ ಜೆಟ್ ಇಂಧನಕ್ಕೀಗ 38,098 ರೂಪಾಯಿಗಳು. ಈ ಹಿಂದೆ 37,475 ರೂಪಾಯಿಗಳಿದ್ದವು.