ಮಾಧ್ಯಮಗಳು ವರದಿ ಮಾಡಿದಷ್ಟು ದೊಡ್ಡ ಮೊತ್ತದ ನಕಲಿ ನೋಟುಗಳು ದೇಶದಲ್ಲಿ ಚಲಾವಣೆಯಾಗುತ್ತಿಲ್ಲ; ಚಲಾವಣೆಯಾಗುವ ಹತ್ತು ಲಕ್ಷ ನೋಟುಗಳಲ್ಲಿ ಕೇವಲ ನಾಲ್ಕು ನೋಟುಗಳು ಮಾತ್ರ ಖೋಟಾ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.
2007-08ರ ಸಾಲಿನಲ್ಲಿ ಗುರುತಿಸಿದ ಆಧಾರದಲ್ಲಿ ಈ ಮಾಹಿತಿ ನೀಡಲಾಗಿದೆ. ಈ ಅವಧಿಯಲ್ಲಿ ಆರ್‌ಬಿಐ ಸೇರಿದಂತೆ ಬ್ಯಾಂಕಿಂಗ್ ವ್ಯವಸ್ಥೆಯು ಪ್ರತೀ 10 ಲಕ್ಷ ನೋಟುಗಳಲ್ಲಿ ನಾಲ್ಕು ಖೋಟಾ ನೋಟುಗಳಿರುವುದನ್ನು ಪತ್ತೆ ಹಚ್ಚಿದೆ ಎಂದು ಸೆಂಟ್ರಲ್ ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬ್ಯಾಂಕಿಂಗ್ ವ್ಯವಸ್ಥೆಯು ಈ ಅವಧಿಯಲ್ಲಿ 4,422.5 ಕೋಟಿ ನೋಟುಗಳಲ್ಲಿ 1,95,811 ನೋಟುಗಳು ನಕಲಿಯಾಗಿರುವುದನ್ನು ಗುರುತಿಸಿದೆ.
ಭಾರತದಲ್ಲಿ ಚಲಾವಣೆಯಾಗುತ್ತಿರುವ ನಕಲಿ ನೋಟುಗಳ ಅಂದಾಜು ವಿವರಗಳನ್ನು ನಾಯಕ್ ಸಮಿತಿಯು ನೀಡಿದೆ ಎಂಬ ತಪ್ಪು ವರದಿಗಳನ್ನು ಕೆಲವು ಮಾಧ್ಯಮಗಳು ವರದಿ ಮಾಡಿವೆ ಎಂದು ಆರ್‌ಬಿಐ ತಿಳಿಸಿದೆ.
ಖೋಟಾ ನೋಟುಗಳ ಬಗ್ಗೆ ಯಾವುದೇ ಸಮಿತಿ ಅಥವಾ ಏಜೆನ್ಸಿಗಳು ಅಂದಾಜು ಮಾಡಿಲ್ಲ ಎಂದು ಬ್ಯಾಂಕ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿತು.
1988ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ನಾಯಕ್ ಸಮಿತಿಯು ನೋಟುಗಳ ವ್ಯವಸ್ಥೆಯಲ್ಲಿ 2000 ಇಸವಿಯಲ್ಲಿ 1,69,000 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳಿವೆ ಎಂದು ಅಂದಾಜು ಮಾಡಿತ್ತು.
"ನಾಯಕ್ ಸಮಿತಿಯು ನಕಲಿ ನೋಟುಗಳ ಬಗ್ಗೆ ಯಾವುದೇ ಅಧ್ಯಯನ ನಡೆಸಿಲ್ಲ ಅಥವಾ ಇಂತಹ ನೋಟುಗಳ ಬಗ್ಗೆ ಯಾವುದೇ ಅಂಕಿ-ಅಂಶಗಳನ್ನು ನೀಡಿಲ್ಲ" ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
100 ರೂಪಾಯಿ ಮುಖಬೆಲೆಯ 7.34 ಲಕ್ಷ ನೋಟುಗಳು, 500 ರೂಪಾಯಿಯ 5.76 ಲಕ್ಷ ನೋಟುಗಳು ಹಾಗೂ 1,000 ರೂಪಾಯಿ ಮುಖಬೆಲೆಯ 1.09 ಲಕ್ಷ ನೋಟುಗಳನ್ನು 2006-09ರ ಮೇ 31ರವರೆಗೆ ವಶ ಪಡಿಸಿಕೊಳ್ಳಲಾಗಿದೆ ಎಂದು ಸರಕಾರವು ರಾಜ್ಯಸಭೆಯಲ್ಲಿ ಇದೇ ವಾರ ತಿಳಿಸಿತ್ತು.
ಅದೇ ಹೊತ್ತಿಗೆ ಗೃಹ ಸಚಿವಾಲಯದ ರಾಷ್ಟ್ರೀಯ ಅಪರಾಧ ದಾಖಲೆಗಳ ಇಲಾಖೆಯ ಪ್ರಕಾರ 2007ರಲ್ಲಿ 10.54 ಕೋಟಿ ರೂಪಾಯಿ, 2008ರಲ್ಲಿ 21.45 ಕೋಟಿ ರೂಪಾಯಿ ಮತ್ತು 2009ರ ಮಾರ್ಚ್‌ವರೆಗೆ 4.09 ಕೋಟಿ ರೂಪಾಯಿ ಮುಖಬೆಲೆಯುಳ್ಳ ಮೊತ್ತದ ನಕಲಿ ನೋಟುಗಳನ್ನು ಬ್ಯಾಂಕುಗಳು ಹಾಗೂ ಇತರ ಇಲಾಖೆಗಳು ವಶಪಡಿಸಿಕೊಂಡಿವೆ.