ಆದಾಯ ತೆರಿಗೆ ಪಾವತಿದಾರರು ನಿಧಾನವಾಗಿ ಇ-ಫೈಲಿಂಗ್‌ನತ್ತ ಹೊರಳುತ್ತಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಇದು ಗರಿಷ್ಠ ಮಟ್ಟ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಪ್ರಸಕ್ತ ಯುವ ಜನತೆ ಹಾಗೂ ಅವರ ಆತ್ಮೀಯರು ಸುಲಭ ಮತ್ತು ವೇಗವಾಗಿ ಮಾಡಬಹುದಾದ ಇ-ಫೈಲಿಂಗ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಕೆಲವು ವರ್ಷಗಳ ಹಿಂದೆ 25 ಲಕ್ಷ ಜನ ಇ-ಫೈಲಿಂಗ್ ಬಳಸುತ್ತಿದ್ದುದು ದಾಖಲಾಗಿತ್ತು. ಅದೀಗ 2008-09ರ ಹೊತ್ತಿಗೆ 45 ಲಕ್ಷ ದಾಟಿದೆ. ಮುಂದಿನ ಮೂರು ವರ್ಷಗಳಲ್ಲಿ ಇದು ಒಂದು ಕೋಟಿಯನ್ನು ತಲುಪುವ ನಿರೀಕ್ಷೆಗಳಿವೆ.
ಇ-ಫೈಲಿಂಗ್‌ನಲ್ಲಿ ಹೆಚ್ಚಳ ದಾಖಲಾಗಲು ಪ್ರಮುಖ ಕಾರಣ ವೈಯಕ್ತಿಕ ತೆರಿಗೆ ಪಾವತಿಸುವ ಯುವ ಜನತೆ. ಅದರಲ್ಲೂ ತೆರಿಗೆ ಪಾವತಿ ಬಗ್ಗೆ ಮಾಹಿತಿಯಿರದವರು, ಅಂದರೆ ಮೊತ್ತ ಮೊದಲ ಬಾರಿ ತೆರಿಗೆ ಪಾವತಿ ಮಾಡುತ್ತಿರುವವರು ಇ-ಫೈಲಿಂಗ್‌ಗೆ ಮೊರೆ ಹೋಗುತ್ತಿದ್ದಾರೆ ಎಂದು ಇ-ಫೈಲಿಂಗ್ ಏಜೆನ್ಸಿಯೊಂದನ್ನು ನಡೆಸುತ್ತಿರುವವರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇ-ಫೈಲಿಂಗ್ ಟೆಕ್ನಾಲಜಿ ವ್ಯವಹಾರಿಕವಾಗಿ ತೀರಾ ಸುಲಭವಾಗಿದೆ. ಈಗೀಗ ಇಂಟರ್ನೆಟನ್ನು ಬುಕ್ಕಿಂಗ್ ಕಾರ್ಯಗಳಿಂದ ಹಿಡಿದು ಶಾಪಿಂಗ್, ಬ್ಯಾಂಕಿಂಗ್ ಕೂಡ ಮಾಡಲು ವ್ಯಾಪಕವಾಗಿ ಬಳಸುತ್ತಿರುವುದರಿಂದ ಇ-ಫೈಲಿಂಗ್ ಯಾರಿಗೂ ಕಷ್ಟವೆನಿಸುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ದೆಹಲಿ, ಮುಂಬೈ, ಕೊಲ್ಕತ್ತಾ, ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆ ಮತ್ತು ಅಹಮದಾಬಾದ್‌ಗಳಂತಹ ಮಹಾ ನಗರಗಳಲ್ಲಿ ಇ-ಫೈಲಿಂಗ್ ಜನಪ್ರಿಯವಾಗುತ್ತಿದೆ.
ಕೊಚ್ಚಿ, ಮೈಸೂರು, ಕೊಯಂಬತ್ತೂರು, ಭೋಪಾಲ್ ಮತ್ತು ನಾಗ್ಪುರಗಳಂತಹ ಹಲವು ನಗರಗಳಲ್ಲಿಯೂ ಇ-ಫೈಲಿಂಗ್ ಮಾಡುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಎರಡನೇ ಹಂತ ಹಾಗೂ ಮೂರನೇ ಹಂತದ ನಗರಗಳಲ್ಲೂ ಇದೇ ಪರಿಸ್ಥಿತಿ ಕಂಡು ಬರುತ್ತಿದೆ.
35ರಿಂದ 45ರ ನಡುವಿನ ಕೆಲವರು ಇ-ಫೈಲಿಂಗ್ ಅವಕಾಶದತ್ತ ಓಗೊಡುತ್ತಿಲ್ಲ. ನಾವು ಯಾವತ್ತೂ ಮಾಡುವ ವಿಧಾನದಲ್ಲೇ ಮುಂದುವರಿಯುತ್ತೇವೆ ಎಂದು ಮಾಮೂಲಿ ರೀತಿಯಲ್ಲೇ ತೆರಿಗೆ ಪಾವತಿ ಮಾಡುತ್ತಾರೆ. ಆದರೆ ಇಲ್ಲೂ ಹಲವರು ತಮ್ಮನ್ನು ಆಧುನೀಕರಣಕ್ಕೆ ಒಗ್ಗಿಸಿಕೊಂಡು ಇ-ಪೈಲಿಂಗ್‌ಗೆ ಮುಂದಾಗುತ್ತಿರುವುದು ಕೂಡ ಕಂಡು ಬಂದಿದೆ.