ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮುಂದಿನ ವರ್ಷದಿಂದ ವಿದ್ಯುತ್ ದಕ್ಷತೆ ಶ್ರೇಯಾಂಕ ಕಡ್ಡಾಯ
(Refrigerator | air-conditioner | Bureau of Energy Efficiency | Jairam Ramesh)
ರೆಫ್ರಿಜರೇಟರುಗಳು, ಏರ್-ಕಂಡೀಷನರುಗಳು, ಟ್ರಾನ್ಸ್‌ಫಾರ್ಮರುಗಳು ಮತ್ತು ಫ್ಲೋರೆಸೆಂಟ್ ಲ್ಯಾಂಪ್‌ಗಳು ಮುಂದಿನ ವರ್ಷದಿಂದ ಭಾರತ ಸರಕಾರದ ವಿದ್ಯುತ್ ಕಾರ್ಯಕ್ಷಮತೆ ಪರಿಶೀಲನಾ ಇಲಾಖೆಯಿಂದ (ಬಿಇಇ) ದಕ್ಷತೆ ಪ್ರಮಾಣಕ್ಕೊಳಗಾಗುವುದು ಕಡ್ಡಾಯ.
2010ರ ಜನವರಿ 7ರಿಂದ ಇದು ಜಾರಿಗೆ ಬರಲಿದೆ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ರಾಜ್ಯ ಸಚಿವ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಇದಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ ಎಂದು ರಮೇಶ್ ಪತ್ರಕರ್ತರೊಂದಿಗೆ ಮಾತನಾಡುತ್ತಾ ವಿವರಿಸಿದರು.
ಮುಂದಿನ ದಿನಗಳಲ್ಲಿ ರೆಫ್ರಿಜರೇಟರುಗಳು, ಏರ್-ಕಂಡೀಷನರುಗಳು, ವಿತರಣಾ ಟ್ರಾನ್ಸ್‌ಫಾರ್ಮರುಗಳು ಮತ್ತು ಫ್ಲೋರೆಸೆಂಟ್ ಲ್ಯಾಂಪ್‌ಗಳು ಸೇರಿದಂತೆ ಇತರ ಇಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಗೆ ಮತ್ತು ಮಾರಾಟಕ್ಕೆ (ರಫ್ತು ಸಹಿತ) ಸರಕಾರದ ಈ ಇಲಾಖೆಯಿಂದ ಕಾರ್ಯದಕ್ಷತೆ ಮುದ್ರೆ ಅಗತ್ಯ ಎಂದಿದ್ದಾರೆ.
ದಕ್ಷತೆಯನ್ನು ಅಳೆಯುವ ನಿಯಮಾವಳಿಯನ್ನು ಪರಿಚಯಿಸಿದ ನಂತರ ಅದನ್ನು ಇಲೆಕ್ಟ್ರಾನಿಕ್ ಮೋಟಾರುಗಳು, ಅಡುಗೆ ಅನಿಲದ ಸ್ಟವ್ (ಎಲ್‌ಪಿಜಿ) ಮತ್ತು ಕಲರ್ ಟೀವಿಗಳಿಗೂ ವಿಸ್ತರಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಕಳೆದ ವರ್ಷದ ಜೂನ್ 30ರಂದು ಪ್ರಧಾನಿ ಮನಮೋಹನ್ ಸಿಂಗ್ ಬಿಡುಗಡೆಗೊಳಿಸಿದ ಭಾರತದ 'ಹವಾಮಾನ ಬದಲಾವಣೆ ರಾಷ್ಟ್ರೀಯ ಕ್ರಿಯಾಯೋಜನೆ'ಯಲ್ಲಿ ಒತ್ತು ನೀಡಲಾಗಿರುವ ಎಂಟು ಕ್ಷೇತ್ರಗಳಲ್ಲಿ ವಿದ್ಯುತ್ ದಕ್ಷತೆಯೂ ಒಂದು.