ಆರ್ಥಿಕ ಸಹಾಯ ಮಾಡದಿದ್ದರೆ ಆಗಸ್ಟ್ 18ರಂದು ದೇಶದಾದ್ಯಂತ ವೈಮಾನಿಕ ಸೇವೆಯನ್ನೊದಗಿಸದೆ ಮುಷ್ಕರ ನಡೆಸುವುದಾಗಿ ಬೆದರಿಕೆಯೊಡ್ಡಿರುವ ಖಾಸಗಿ ವಿಮಾನಯಾನ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿರುವ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್, ಸರಕಾರವು ಯಾವುದೇ ಪರಿಹಾರ ಪ್ಯಾಕೇಜ್ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ 18ರ ಮುಷ್ಕರ ಕರೆಯನ್ನು ಹಿಂಪಡೆದುಕೊಳ್ಳುವಂತೆ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡಿರುವ ಅವರು, ಪ್ರಯಾಣಿಕರ ಹಿತಾಸಕ್ತಿಯನ್ನು ಕಾಪಾಡಲಾಗುತ್ತದೆ; ಅಗತ್ಯ ಬಿದ್ದರೆ ಮುಷ್ಕರ ನಿರತರ ವಿರುದ್ಧ ಡಿಜಿಸಿಎ ಕ್ರಮ ಕೈಗೊಳ್ಳಲಿದೆ ಎಂದರು.
ಆಗಸ್ಟ್ 18ರಂದು ಪ್ರಯಾಣಿಕರಿಗೆ ಅನನುಕೂಲತೆಯಾಗದಂತೆ ಏರ್ ಇಂಡಿಯಾವು ಹೆಚ್ಚುವರಿ ವಿಮಾನಗಳ ಹಾರಾಟ ನಡೆಸಲಿದೆ. ಪ್ಯಾರಾಮೌಂಟ್ ಏರ್‌ವೇಸ್ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಇದುವರೆಗೂ ಯಾವುದೇ ಸ್ಪಷ್ಟತೆಗೆ ಬಂದಿಲ್ಲ ಎಂದು ಅವರು ತಿಳಿಸಿದರು.
ದಿನಂಪ್ರತಿ ಲಕ್ಷಾಂತರ ಪ್ರಯಾಣಿಕರನ್ನು ಹೊತ್ತೊಯ್ಯುವ ಜೆಟ್ ಏರ್‌ವೇಸ್, ಕಿಂಗ್‌ಫಿಶರ್, ಸ್ಪೈಸ್‌ಜೆಟ್, ಇಂಡಿಗೋ ಮತ್ತು ಗೋಏರ್ ವಿಮಾನಯಾನ ಸಂಸ್ಥೆಗಳು ಮುಷ್ಕರಕ್ಕಿಳಿದರೆ ತೊಂದರೆ ಅನುಭವಿಸುವುದು ಬಹುತೇಕ ಖಚಿತ ಎಂದು ವೈಮಾನಿಕ ಇಲಾಖೆಯ ಅಧಿಕಾರಿಗಳು ಕೂಡ ಎಚ್ಚರಿಸಿದ್ದಾರೆ.
ಖಾಸಗಿ ವಿಮಾನಯಾನ ಸಂಸ್ಥೆಗಳು ಪ್ರತಿಭಟನೆ ನಡೆಸುವ ಮೊದಲು ಸರಕಾರದೊಂದಿಗೆ ಮಾತುಕತೆಗೆ ಬರುವುದು ಉತ್ತಮ. ಈ ದಾರಿ ಹಿಡಿದಲ್ಲಿ ಅವುಗಳಿಗೆ ನಷ್ಟ ಕಟ್ಟಿಟ್ಟ ಬುತ್ತಿ ಎಂದಿರುವ ಸಚಿವಾಲಯ, ಆಗಸ್ಟ್ 18ರಂದು ಪ್ರಯಾಣಕ್ಕೆಂದು ಟಿಕೆಟ್ ಕಾದಿರಿಸಿದ ಪ್ರಯಾಣಿಕರಿಗೆ ಮುಂಗಡ ಟಿಕೆಟ್ ಹಣವನ್ನು ವಾಪಸ್ ಮಾಡುವಂತೆ ಆದೇಶಿಸಿದೆ.